6.5 ಕಿ.ಮೀ. ಉದ್ದದ ಸೋನಾಮಾರ್ಗ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ | PC : PTI
ಶ್ರೀನಗರ: ದಕ್ಷಿಣ ಕಾಶ್ಮೀರದ ಗಂಡೆರ್ಬಾಲ್ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 6.5 ಕಿಲೋಮೀಟರ್ ಉದ್ದದ ಝಡ್-ಮೋರ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಈ ಸುರಂಗ ಮಾರ್ಗದ ಮೂಲಕ, ಸೋನ್ ಮಾರ್ಗ ಪ್ರವಾಸಿ ರಿಸಾರ್ಟ್ಗೆ ವರ್ಷವಿಡೀ ಹೋಗಬಹುದಾಗಿದೆ.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10:45ರ ಸುಮಾರಿಗೆ ಇಳಿದ ಪ್ರಧಾನಿ, ಆಯಕಟ್ಟಿನ ಸುರಂಗ ಮಾರ್ಗದ ಉದ್ಘಾಟನೆಗಾಗಿ ಸೋನ್ ಮಾರ್ಗಕ್ಕೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದರು. ರಕ್ಷಣಾ ದೃಷ್ಟಿಯಿಂದಲೂ ಈ ಸುರಂಗ ಮಾರ್ಗ ಮಹತ್ವವನ್ನು ಪಡೆದುಕೊಂಡಿದೆ.
ಸುರಂಗ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಜೊತೆಗೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಉಪಸ್ಥಿತರಿದ್ದರು.
ಗಂಡೆರ್ಬಾಲ್ ಜಿಲ್ಲೆಯಲ್ಲಿ ಗಗನ್ಗಿರ್ ಮತ್ತು ಸೋ ಮಾರ್ಗವನ್ನು ಸಂಪರ್ಕಿಸುವ 6.5 ಕಿಲೋಮೀಟರ್ ಉದ್ದದ ಎರಡು ಪಥಗಳ ಸುರಂಗ ಮಾರ್ಗವನ್ನು 2,700 ಕೋಟಿ ರೂ.ಗಿಂತಲೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುರಂಗದಲ್ಲಿ 7.5 ಮೀಟರ್ ಅಗಲದ ತುರ್ತು ನಿರ್ಗಮನ ದಾರಿಯಿದೆ.