ಪ್ರಧಾನಿ ಮೋದಿ ಪದವಿ ವಿವಾದ: ಮಾಹಿತಿ ಬಹಿರಂಗ ವಿರುದ್ಧ ದಿಲ್ಲಿ ವಿವಿ ಅರ್ಜಿ ಕುರಿತು ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಆದೇಶವನ್ನು ಪ್ರಶ್ನಿಸಿ ದಿಲ್ಲಿ ವಿವಿಯು ಸಲ್ಲಿಸಿರುವ ಅರ್ಜಿಯ ಕುರಿತು ತನ್ನ ತೀರ್ಪನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ಕಾಯ್ದಿರಿಸಿದೆ.
ವಾದ-ಪ್ರತಿವಾದಗಳನ್ನು ಆಲಿಸಲಾಗಿದ್ದು,ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ನ್ಯಾ.ಸಚಿನ್ ದತ್ತಾ ತನ್ನ ಆದೇಶದಲ್ಲಿ ತಿಳಿಸಿದರು.
ದಿಲ್ಲಿ ವಿವಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಸಿಐಸಿಯ ಆದೇಶವು ರದ್ದುಗೊಳಿಸಲು ಅರ್ಹವಾಗಿದೆ ಎಂದು ಹೇಳಿದರಾದರೂ,ಮೋದಿಯವರು 1978ರಲ್ಲಿ ಬಿಎ ಪದವಿಯನ್ನು ಗಳಿಸಿದ್ದು,ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ವಿವಿಗೆ ಯಾವುದೇ ಆಕ್ಷೇಪವಿಲ್ಲ ಎಂದು ತಿಳಿಸಿದರು.
ನೀರಜ್ ಎನ್ನುವವರ ಆರ್ಟಿಐ ಅರ್ಜಿಯ ಮೇರೆಗೆ ಸಿಐಸಿಯು 2016,ಡಿ.21ರಂದು ಮೋದಿಯವರು ಪದವಿಯನ್ನು ಗಳಿಸಿದ್ದರೆನ್ನಲಾದ 1978ರ ಬಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿತ್ತು.
2017,ಜ.23ರಂದು ದಿಲ್ಲಿ ಉಚ್ಚ ನ್ಯಾಯಾಲಯವು ಸಿಐಸಿ ಆದೇಶಕ್ಕೆ ತಡೆಯನ್ನು ನೀಡಿತ್ತು.