ಅಶೋಕ್ ಗೆಹ್ಲೋಟ್ರನ್ನು ಟೀಕಿಸಲು ಉದಯಪುರ ಟೈಲರ್ ಹತ್ಯೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI)
ಚಿತ್ತೋರ್ಗಢ: ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ವಿಫಲವಾಗಿದೆ ಎಂದು ಪ್ರತಿಪಾದಿಸಲು ಪ್ರಧಾನಿ ನರೇಂದ್ರ ಮೋದಿ ಅವರು, ಉದಯಪುರದಲ್ಲಿ 2022 ರಲ್ಲಿ ನಡೆದಿದ್ದ ಟೈಲರ್ನ ಭೀಕರ ಹತ್ಯೆಯನ್ನು ಉಲ್ಲೇಖಿಸಿದ್ದಾರೆ.
"ಉದಯಪುರದಲ್ಲಿ ಏನಾಯಿತು, ಯಾರಾದರೂ ಇಂತಹ ಘಟನೆ ಸಂಭವಿಸಬಹುದೆಂದು ಊಹಿಸಿದ್ದರೆ? ಬಟ್ಟೆ ಹೊಲಿಯಲು ಬಂದವರು, ಕತ್ತು ಸೀಳಿ ಕೃತ್ಯದ ವೀಡಿಯೊವನ್ನು ಹಂಚಿಕೊಂಡರು," ಕನ್ಹಯ್ಯಾ ಲಾಲ್ ಹತ್ಯೆಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ₹ 7,000 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ತೋರ್ಗಢದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಜನರನ್ನು ದಾರಿತಪ್ಪಿಸುವ ಮೂಲಕ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಕುರ್ಚಿ ಉಳಿಸುವಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದರು.
“ಗೆಹ್ಲೋಟ್ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಯೋಜನೆಗಳನ್ನು ನಿಲ್ಲಿಸಬೇಡಿ ಎಂದು ಬಿಜೆಪಿಗೆ ವಿನಂತಿಸುತ್ತಿದ್ದಾರೆ. ನಾವು ಯಾವುದೇ ಸಾರ್ವಜನಿಕ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಬಿಜೆಪಿ ಯಾವುದೇ ಸಾರ್ವಜನಿಕ ಯೋಜನೆಯನ್ನು ನಿಲ್ಲಿಸುವುದಿಲ್ಲ ಆದರೆ ಅದನ್ನು ಸುಧಾರಿಸಲು ಪ್ರಯತ್ನಿಸುತ್ತದೆ, ಇದು ಮೋದಿಯ ಭರವಸೆ" ಎಂದು ಅವರು ಹೇಳಿದರು.
ಕಳೆದ ವಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಗೆಹ್ಲೋಟ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದರು.