ಜನರು ನೀಡಿರುವ ತೀರ್ಪನ್ನು ಪ್ರಧಾನಿ ಮೋದಿ ಅರ್ಥೈಸಿಕೊಂಡಿಲ್ಲ : ಕಾಂಗ್ರೆಸ್ ಟೀಕೆ
ಜೈರಾಮ್ ರಮೇಶ್ | PTI
ಹೊಸದಿಲ್ಲಿ : ಸೋಮವಾರ 18ನೇ ಲೋಕಸಭೆಯ ಆರಂಭಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಟೀಕಿಸಿರುವ ಕಾಂಗ್ರೆಸ್, ಅವರ ಬಳಿ ಕೊಡಲು ಹೊಸದೇನೂ ಇಲ್ಲ ಮತ್ತು ಒಣಮಾತುಗಳಲ್ಲೇ ದಾರಿ ತಪ್ಪಿಸುವ ತನ್ನ ಎಂದಿನ ವರಸೆಯನ್ನೇ ಅವರು ಆಶ್ರಯಿಸಿದ್ದಾರೆ ಎಂದು ಹೇಳಿದೆ.
ಜನತೆಯ ತೀರ್ಪಿನ ನಿಜವಾದ ಅರ್ಥವನ್ನು ತಾನು ತಿಳಿದುಕೊಂಡಿದ್ದೇನೆ ಎನ್ನುವುದಕ್ಕೆ ಪ್ರಧಾನಿ ಯಾವುದೇ ಪುರಾವೆಯನ್ನು ತೋರಿಸಿಲ್ಲ ಎಂದು ಎಕ್ಸ್ ಪೋಸ್ಟ್ ನಲ್ಲಿ ಕುಟುಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು,ಲೋಕಸಭಾ ಚುನಾವಣೆಗಳಲ್ಲಿ ವೈಯಕ್ತಿಕ,ರಾಜಕೀಯ ಮತ್ತು ನೈತಿಕವಾಗಿ ಭಾರೀ ಸೋಲನ್ನು ಕಂಡಿರುವ ಅಜೈವಿಕ ಪ್ರಧಾನಿ 18ನೇ ಲೋಕಸಭೆ ತನ್ನ ಅಧಿಕಾರಾವಧಿಯನ್ನು ಆರಂಭಿಸಲು ಸಜ್ಜಾಗುತ್ತಿರುವಾಗ ಈಗಷ್ಟೇ ಸಂಸತ್ತಿನ ಹೊರಗೆ ತನ್ನ ಎಂದಿನ ‘ದೇಶಕ್ಕಾಗಿ ಸಂದೇಶ’ವನ್ನು ನೀಡಿದ್ದಾರೆ. ಅವರು ಹೊಸದಾಗಿ ಏನನ್ನೂ ಹೇಳಿಲ್ಲ ಮತ್ತು ವಿಷಯಾಂತರ ಮಾಡುವ ತನ್ನ ಎಂದಿನ ವರಸೆಯನ್ನೇ ಆಶ್ರಯಿಸಿದ್ದಾರೆ. ವಾರಣಾಸಿಯಲ್ಲಿ ತನ್ನನ್ನು ಅಲ್ಪ ಅಂತರದಿಂದ ಸಂಶಯಾಸ್ಪದವಾಗಿ ಗೆಲ್ಲಿಸಿದ ಜನತೆಯ ತೀರ್ಪಿನ ನಿಜವಾದ ಅರ್ಥವನ್ನು ತಾನು ತಿಳಿದುಕೊಂಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆಯನ್ನು ಅವರು ತೋರಿಸಿಲ್ಲ ಎಂದು ಹೇಳಿದ್ದಾರೆ.
ಮೋದಿಯವರಿಗೆ ಯಾವುದೇ ಸಂಶಯ ಬೇಡ. ಇಂಡಿಯಾ ಮೈತ್ರಿಕೂಟವು ಅವರಿಗೆ ಪ್ರತಿಯೊಂದೂ ನಿಮಿಷದ ಲೆಕ್ಕವನ್ನು ಕೇಳಲಿದೆ. ಅವರನ್ನು ಸಂಪೂರ್ಣವಾಗಿ ಬಯಲಿಗೆಳೆಯಲಿದೆ ಎಂದೂ ರಮೇಶ್ ಎಕ್ಸ್ ನಲ್ಲಿ ಹೇಳಿದ್ದಾರೆ.
ಪ್ರಧಾನಿ ಹೇಳಿದ್ದೇನು?
18ನೇ ಲೋಕಸಭೆಯ ಆರಂಭಕ್ಕೆ ಮುನ್ನ ನೂತನ ಸಂಸತ್ ಸಂಕೀರ್ಣದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಜನರು ಸಂಸತ್ತಿನಲ್ಲಿ ಚರ್ಚೆಗಳನ್ನು ಬಯಸುತ್ತಾರೆಯೇ ಹೊರತು ಘೋಷಣೆಗಳನ್ನಲ್ಲ. ಹೀಗಾಗಿ ಭಾರತಕ್ಕೆ ಜವಾಬ್ದಾರಿಯುತ ಪ್ರತಿಪಕ್ಷದ ಅಗತ್ಯವಿದೆ. ಜನರು ಸಂಸತ್ತಿನಲ್ಲಿ ಚರ್ಚೆ,ಕಾರ್ಯಶ್ರದ್ಧೆಯನ್ನು ಬಯಸುತ್ತಾರೆಯೇ ಹೊರತು ಗಲಾಟೆಯನ್ನಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಪ್ರತಿಪಕ್ಷಗಳಿಂದ ಉತ್ತಮ ನಡೆಗಳನ್ನು ನಿರೀಕ್ಷಿಸುತ್ತಾರೆ. ಆದರೆ ಅದು ಈವರೆಗೆ ನಿರಾಶಾದಾಯಕವಾಗಿದೆ ಎಂದು ಹೇಳಿದ ಮೋದಿ, ಪ್ರತಿಪಕ್ಷವು ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಕಾಯ್ದುಕೊಳ್ಳುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.