ತಳಮಳಗೊಂಡಿರುವ ಮೋದಿ ಹಿಂದು-ಮುಸ್ಲಿಮ್ ನಿರೂಪಣೆಗೆ ಮೊರೆ ಹೋಗುತ್ತಿದ್ದಾರೆ: ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ | Photo : PTI
ಹೊಸದಿಲ್ಲಿ: ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ‘ಮುಸ್ಲಿಮ್ ಲೀಗ್ ಛಾಪು’ ಟೀಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳನ್ನು ದಾಟಲು ಪರದಾಡುತ್ತಿರುವ ಬಗ್ಗೆ ಮೋದಿ ಭಯಗೊಂಡಿದ್ದು,ಮತ್ತೊಮ್ಮೆ ‘ಅದೇ ಹಳಸಲು ಹಿಂದು-ಮುಸ್ಲಿಮ್ ನಿರೂಪಣೆ ’ಯ ಮೊರೆ ಹೋಗಿದ್ದಾರೆ ಎಂದು ಕುಟುಕಿದೆ.
ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದ ಮೋದಿ,ಅದರ ಚುನಾವಣಾ ಪ್ರಣಾಳಿಕೆಯು ಮುಸ್ಲಿಮ್ ಲೀಗ್ನ ಛಾಪನ್ನು ಹೊಂದಿದೆ ಮತ್ತು ಅದರ ನಾಯಕರ ಹೇಳಿಕೆಗಳು ರಾಷ್ಟ್ರೀಯ ಸಮಗ್ರತೆ ಮತ್ತು ಸನಾತನ ಧರ್ಮದ ಬಗ್ಗೆ ಹಗೆತನವನ್ನು ಪ್ರದರ್ಶಿಸಿವೆ ಎಂದು ಆರೋಪಿಸಿದ್ದರು.
ಇಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೇತ್ ಅವರು, ಬಿಜೆಪಿಯು ನಿರಂತರವಾಗಿ ನೆಲೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಇದೇ ಕಾರಣಕ್ಕೆ ಮುಸ್ಲಿಮ್ ಲೀಗ್ ಬಗ್ಗೆ ಪ್ರಧಾನಿಯವರ ಪ್ರೀತಿ ಮರುಕಳಿಸಿದೆ ಎಂದು ಹೇಳಿದರು.
ಕಾಂಗ್ರೆಸಿನ ಪ್ರಣಾಳಿಕೆಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಅದು ದೇಶದ ಭವಿಷ್ಯಕ್ಕಾಗಿ ನೀಲನಕ್ಷೆಯಾಗಿದೆ ಎಂದು ಹೇಳಿದ ಶ್ರೀನೇತ್, 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಳಿಕ ಮತ್ತು ದೇಶವು ಚುನಾವಣೆಯ ಹೊಸ್ತಿಲಲ್ಲಿರುವಾಗ ಪ್ರಧಾನಿ ತನ್ನ ರಿಪೋರ್ಟ್ ಕಾರ್ಡನ್ನು ತೋರಿಸಿ ಮತಗಳನ್ನು ಯಾಚಿಸಬೇಕಿರುವಾಗ ಅವರು ಆತಂಕಗೊಂಡಿದ್ದಾರೆ. ಅವರು ಮತ್ತೊಮ್ಮೆ ಅದೇ ಚರ್ವಿತಚರ್ವಣ ಹಿಂದು-ಮುಸ್ಲಿಮ್ ನಿರೂಪಣೆಯನ್ನು ಆಶ್ರಯಿಸಿದ್ದಾರೆ ಎಂದರು.
ಮೋದಿಯವರ ‘ಮುಸ್ಲಿಮ್ ಲೀಗ್ ಮೇಲಿನ ಪ್ರೀತಿ’ ಹೊಸದೇನಲ್ಲ ಎನ್ನುವುದು ವಾಸ್ತವವಾಗಿದೆ ಎಂದು ಹೇಳಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಟದ ಸಮಯದಲ್ಲಿಯೂ ಬ್ರಿಟಿಷರ ಜೊತೆ ನಿಂತವರು ಇದೇ ಜನರಾಗಿದ್ದರು ಮತ್ತು ಮುಸ್ಲಿಮ್ ಲೀಗ್ನೊಂದಿಗೆ ಕೋಮು ಬಿರುಕನ್ನು ಸೃಷ್ಟಿಸುವ ಯಾವುದೇ ಅವಕಾಶವನ್ನು ಬಿಟ್ಟಿರಲಿಲ್ಲ. 1942ರಲ್ಲಿ ಮೌಲಾನಾ ಆಝಾದ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಮಹಾತ್ಮಾ ಗಾಂಧಿಯವರು ಕರೆ ನೀಡಿದ್ದ ಚಲೇಜಾವ್ ಆಂದೋಲನದಲ್ಲಿ ಭಾಗಿಯಾಗಿದ್ದ ದೇಶವು ‘ಮಾಡು ಅಥವಾ ಮಡಿ ’ ಪ್ರತಿಜ್ಞೆಯನ್ನು ಮಾಡಿದ್ದಾಗ ಶ್ಯಾಮಪ್ರಸಾದ್ ಮುಖರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಮತ್ತು ಅವರ ಸಮಾನ ಮನಸ್ಕರು ಸಿಂಧ್ ಮತ್ತು ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ ಮುಸ್ಲಿಮ್ ಲೀಗ್ ಜೊತೆ ಸಮ್ಮಿಶ್ರ ಸರಕಾರವನ್ನು ನಡೆಸುತ್ತಿದ್ದರು. ಅಲ್ಲದೆ ಈ ಸಾಮೂಹಿಕ ಆಂದೋಲನವನ್ನು ಹೇಗೆ ದಮನಿಸಬೇಕು ಎಂಬ ಸಲಹೆ ನೀಡಿ ಬ್ರಿಟಿಷರಿಗೆ ಪತ್ರಗಳನ್ನೂ ಬರೆಯುತ್ತಿದ್ದರು ಎಂದರು.
ಈ ಜನರು ಮುಸ್ಲಿಮ್ ಲೀಗ್ ಮತ್ತು ಬ್ರಿಟಿಷರೊಂದಿಗೆ ಆಳವಾದ ಪ್ರೀತಿ,ಅಭಿಮಾನ ಮತ್ತು ಬಾಂಧವ್ಯಗಳನ್ನು ಹೊಂದಿದ್ದರು ಎಂದು ಶ್ರೀನೇತ್ ಆರೋಪಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದಾಗಿನಿಂದ ಬಿಜೆಪಿ ಆತಂಕಕ್ಕೊಳಗಾಗಿದೆ ಎನ್ನುವುದು ವಾಸ್ತವವಾಗಿದೆ ಎಂದ ಅವರು, ಇನ್ನೊಂದು ದೊಡ್ಡ ವಾಸ್ತವವೆಂದರೆ ಬಿಜೆಪಿಯು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿದೆ. ಅದು 180ರ ಗಡಿಯನ್ನು ದಾಟಲು ಹೆಣಗಾಡುತ್ತಿದೆ ಎಂದು ಇತ್ತೀಚಿನ ಸಮೀಕ್ಷೆಗಳು ತೋರಿಸಿವೆ ಎಂದರು.