ಪ್ರಧಾನಿ ಮೋದಿ ತನ್ನ ಶ್ರೀಮಂತ ಗೆಳೆಯರಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ Photo: twitter/priyankagandhi
ಜೈಪುರ: ದೇಶದಲ್ಲಿ ಬಡವರ ಹಣ ವೆಚ್ಚ ಮಾಡಿ ಶ್ರೀಮಂತ ಗೆಳೆಯರಿಗಾಗಿ ಮೋದಿ ತಂಡ ಕೆಲಸ ಮಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ವರ್ಷಾಂತ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಪೂರ್ವ ರಾಜಸ್ಥಾನದ ದೌಸಾ ಜಿಲ್ಲೆಯ ಸಿಕ್ರೈಯಲ್ಲಿ ಶುಕ್ರವಾರ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
13 ಜಿಲ್ಲೆಗಳಿಗೆ ಕುಡಿಯಲು ಹಾಗೂ ನೀರಾವರಿಗೆ ನೀರು ಪೂರೈಸುವ ಉದ್ದೇಶ ಹೊಂದಿದ ಈಸ್ಟರ್ನ್ ರಾಜಸ್ಥಾನ ಕೆನಲ್ ಪ್ರೊಜೆಕ್ಟ್ (ಇಆರ್ಸಿಪಿ)ಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಕುರಿತು ಸುಳ್ಳು ಭರವಸೆ ನೀಡಿ ಪ್ರಧಾನಿ ತಪ್ಪೆಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಇಆರ್ಸಿಪಿ ಯೋಜನೆ ಕುರಿತಂತೆ ನೀಡಿದ ಭರವಸೆಯನ್ನು ಮೋದಿ ಸರಕಾರ ಈಡೇರಿಸಿಲ್ಲ. ಇದು ಬಡ ಜನರಿಂದ ನಿಧಿ ಸಂಗ್ರಹಿಸಿ ಉದ್ಯಮಿಗಳಿಗೆ ಲಾಭ ಮಾಡುವ ನೀತಿಯಂತೆ ಕಾಣುತ್ತಿದೆ. ಇಆರ್ಸಿಪಿ ಕೇವಲ ಕಾಲುವ ಯೋಜನೆ ಅಲ್ಲ. ಬದಲಾಗಿ ಅದು ದೌಸಾ ಹಾಗೂ ಸುತ್ತಮುತ್ತಲಿನ 12 ಜಿಲ್ಲೆಗಳಿಗೆ ಪವಿತ್ರ ಗಂಗೆಯಂತೆ ಜೀವನಾಡಿ’’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಹಾಗೂ ಪ್ರಧಾನಿ ಅವರು ಸಾಮಾನ್ಯ ಜನರ ಕಲ್ಯಾಣಕ್ಕಿಂತ ತಮ್ಮ ಶ್ರೀಮಂತ ಉದ್ಯಮಿ ಗೆಳೆಯರಿಗೆ ಆದ್ಯತೆ ನೀಡುತ್ತಿದ್ದಾರೆ. ಅವರು ಗಮನ ಇರುವುದು ನಿಮ್ಮ ಯೋಗಕ್ಷೇಮದ ಬಗ್ಗೆ ಅಲ್ಲ. ಬದಲಾಗಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಸ್ವಹಿತಾಸಕ್ತಿಯನ್ನು ರಕ್ಷಿಸಲು. ಬಡವರಿಂದ ಸಂಪತ್ತನ್ನು ಸಂಗ್ರಹಿಸುವುದು ಹಾಗೂ ಉದ್ಯಮಿಗಳನ್ನು ಶ್ರೀಮಂತಗೊಳಿಸುವುದು ಅವರ ಏಕೈಕ ಕಾರ್ಯಸೂಚಿಯಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ ಗಾಂಧಿ ಅವರು, ಮೋದಿ ಅವರು ತಮ್ಮ ಹೆಸರಿನಲ್ಲಿ ಮತ ಚಲಾಯಿಸುವಂತೆ ರಾಜಸ್ಥಾನದ ಜನರನ್ನು ಒತ್ತಾಯಿಸುತ್ತಿದ್ದಾರೆ. ಆದುದರಿಂದ ಅವರು ತಮ್ಮ ಪ್ರಧಾನಿ ಸ್ಥಾನವನ್ನು ಬಿಟ್ಟುಕೊಟ್ಟು ಮುಖ್ಯಮಂತ್ರಿಯಾಗಲು ಉದ್ದೇಶಿಸಿದ್ದಾರೆ ಎಂದು ಸೂಚಿಸುತ್ತಿದ್ದಾರೆಯೇ ? ಪಕ್ಷದಲ್ಲಿ ಬೇರೆ ಯಾರೂ ಸಮರ್ಥ ನಾಯಕರು ಇಲ್ಲವೇ ? ಎಂದು ಪ್ರಶ್ನಿಸಿದ್ದಾರೆ.