ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ಮೋದಿ ರಕ್ಷಿಸುತ್ತಿದ್ದಾರೆ : ಕಾಂಗ್ರೆಸ್
ಪ್ರಜ್ವಲ್ ರೇವಣ್ಣ, ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ರಕ್ಷಿಸುತ್ತಿದ್ದಾರೆ ಎಂದು ಸೋಮವಾರ ಇಲ್ಲಿ ಆರೋಪಿಸಿರುವ ಕಾಂಗ್ರೆಸ್, ಈ ವಿಷಯದಲ್ಲಿ ಅವರ ಮೌನವನ್ನು ಪ್ರಶ್ನಿಸಿದೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಅವರು, ಪ್ರಜ್ವಲ್ ರೇವಣ್ಣರ ದುರ್ನಡತೆಯ ಬಗ್ಗೆ ಗೊತ್ತಿದ್ದರೂ ಅವರನ್ನು ಮೈತ್ರಿಕೂಟದ ಜಂಟಿ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಮತ್ತು ಅವರನ್ನು ಹೊಗಳಿ ಅವರ ಪರವಾಗಿ ಮತಗಳನ್ನು ಯಾಚಿಸಿದ್ದಕ್ಕಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೈಂಗಿಕ ದೌರ್ಜನ್ಯದ ವೀಡಿಯೊಗಳು ವೈರಲ್ ಆಗುತ್ತಿರುವ ಬಗ್ಗೆ ಪತ್ರದ ಮೂಲಕ ಮೋದಿಯವರಿಗೆ ಮಾಹಿತಿ ನೀಡಿದ್ದ ಬಿಜೆಪಿ ಶಾಸಕರು ಅವರನ್ನು ಅಭ್ಯರ್ಥಿಯನ್ನಾಗಿ ಮಾಡದಂತೆ ಕೋರಿಕೊಂಡಿದ್ದರು ಎಂದು ಹೇಳಿದ ಶ್ರೀನೇತ್, ಜೆಡಿಎಸ್ ಜೊತೆ ಮೈತ್ರಿ ಮಾತುಕತೆಗಾಗಿ ಗೃಹಸಚಿವ ಅಮಿತ್ ಶಾ ಅವರು ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಸಾವಿರಾರು ಕಾರ್ಯಕರ್ತರು ಹಾಗೂ ಪ್ರೀತಂ ಗೌಡ ಮತ್ತು ಎ.ಟಿ.ರಾಮಸ್ವಾಮಿ ಸೇರಿದಂತೆ ನಾಯಕರು, ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕುಖ್ಯಾತರಾಗಿದ್ದಾರೆ ಮತ್ತು ಕ್ಯಾಮೆರಾದ ಮುಂದೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಹೀಗಾಗಿ ಅವರನ್ನು ಅಭ್ಯರ್ಥಿಯನ್ನಾಗಿಸದಂತೆ ಸೂಚಿಸಿದ್ದರು ಎಂದರು.
ಪ್ರಜ್ವಲ್ ರೇವಣ್ಣ ಮನೆಗೆಲಸದವರು, ಪಕ್ಷದ ಕಾರ್ಯಕರ್ತೆಯರು ಮತ್ತು ಸಂಸದೆಯರು ಸೇರಿದಂತೆ ಎಲ್ಲ ವಯೋಮಾನಗಳ ಮಹಿಳೆಯರ ವಿರುದ್ಧ ಘೋರ ಅಪರಾಧಗಳನ್ನು ಎಸಗಿದ್ದಾರೆ ಎಂದು ಶ್ರೀನೇತ್ ಆರೋಪಿಸಿದರು.’
ದೇಶವನ್ನೇ ತಲ್ಲಣಗೊಳಿಸಿರುವ ಇಡೀ ಘಟನೆಯ ಕುರಿತು ಮೌನ ವಹಿಸಿರುವುದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ವಿರುದ್ಧವೂ ಶ್ರೀನೇತ್ ಕಿಡಿಕಾರಿದರು.
ಮಾಧ್ಯಮಗಳಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದೂ ಅವರು ಬೆಟ್ಟು ಮಾಡಿದರು.
‘ಕರ್ನಾಟಕದ ಮಹಿಳಾ ಆಯೋಗವು ಈ ವಿಷಯವನ್ನು ಕೈಗೆತ್ತಿಕೊಂಡಾಗ ಸೂಕ್ತ ಪ್ರಕ್ರಿಯೆಯ ಬಳಿಕ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲಾಗಿದೆ ಮತ್ತು ಅದೇ ದಿನ ಪ್ರಜ್ವಲ್ ರೇವಣ್ಣ ಯುರೋಪ್ಗೆ ಪರಾರಿಯಾಗಿದ್ದಾರೆ. ಅವರನ್ನು ಹಸ್ತಾಂತರಗೊಳಿಸುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅವರು ಭಾರತೀಯ ಕಾನೂನಿನ ಶಕ್ತಿಯನ್ನು ಎದುರಿಸುವಂತೆ ಮಾಡುತ್ತೇವೆ ’ಎಂದು ಶ್ರೀನೇತ್ ತಿಳಿಸಿದರು.