ಪ್ರಧಾನಿ ಮೋದಿ ‘‘ಭ್ರಷ್ಟಾಚಾರದ ಶಾಲೆ’’ ನಡೆಸುತ್ತಿದ್ದಾರೆ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರು ದೇಶದಲ್ಲಿ ಭ್ರಷ್ಟಾಚಾರದ ಶಾಲೆ ನಡೆಸುತ್ತಿದ್ದಾರೆ. ಅಲ್ಲದೆ, ‘‘ಸಂಪೂರ್ಣ ಭ್ರಷ್ಟಾಚಾರ ವಿಜ್ಞಾನ’’ ವಿಷಯದ ಎಲ್ಲಾ ಅಧ್ಯಾಯಗಳನ್ನು ಬೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ‘ಎಕ್ಸ್’ ವೇದಿಕೆಯಲ್ಲಿ ಅವರು ಚುನಾವಣಾ ಬಾಂಡ್ ವಿಷಯದ ಕುರಿತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನ ಹೊಸ ಜಾಹೀರಾತಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
‘‘ನರೇಂದ್ರ ಮೋದಿ ಅವರು ದೇಶದಲ್ಲಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ಅಲ್ಲಿ ಸಂಪೂರ್ಣ ಭ್ರಷ್ಟಾಚಾರ ವಿಜ್ಞಾನ ವಿಷಯದ ಅಡಿಯಲ್ಲಿ ದೇಣಿಗೆ ಉದ್ಯಮ ಸೇರಿದಂತೆ ಪ್ರತಿಯೊಂದು ಅಧ್ಯಾಯವನ್ನು ಅವರು ವಿಸ್ತೃತವಾಗಿ ಬೋಧಿಸುತ್ತಿದ್ದಾರೆ’’ ಎಂದು ರಾಹುಲ್ ಗಾಂಧಿ ಹಿಂದಿಯ ಪೋಸ್ಟ್ನಲ್ಲಿ ಹೇಳಿದ್ದಾರೆ.
ದಾಳಿಗಳ ಮೂಲಕ ದೇಣಿಗೆ ಸಂಗ್ರಹವನ್ನು ಹೇಗೆ ಮಾಡಲಾಗುತ್ತದೆ. ದೇಣಿಗೆ ಪಡೆದುಕೊಂಡ ಬಳಿಕ ಗುತ್ತಿಗೆಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬ ಕುರಿತ ಅಧ್ಯಾಯಗಳನ್ನು ಪ್ರಧಾನಿ ಅವರು ಬೋಧಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
‘‘ಭ್ರಷ್ಟಾಚಾರದ ಕೊಳೆಗಳನ್ನು ವಾಷಿಂಗ್ ಮೆಷಿನ್ ಹೇಗೆ ತೊಳೆಯುತ್ತದೆ? ತನಿಖಾ ಏಜೆನ್ಸಿಗಳನ್ನು ವಸೂಲಾತಿ ಏಜೆಂಟರನ್ನಾಗಿ ಪರಿವರ್ತಿಸುವ ಮೂಲಕ ಜಾಮೀನು ಹಾಗೂ ಕಾರಾಗೃಹದ ಆಟ ಹೇಗಿರುತ್ತದೆ?’’ ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.
‘‘ಭ್ರಷ್ಟರ ಗುಹೆ’’ಯಾಗಿ ಮಾರ್ಪಟ್ಟಿರುವ ಬಿಜೆಪಿ ತನ್ನ ನಾಯಕರಿಗೆ ಈ ಕ್ರಾಸ್ ಕೋರ್ಸ್ ಅನ್ನು ಕಡ್ಡಾಯಗೊಳಿಸಿದೆ. ಇದಕ್ಕೆ ದೇಶವೇ ಬೆಲೆ ತೆರುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ಜಾಹೀರಾತನ್ನು ತನ್ನ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಹಫ್ತಾ ವಸೂಲಿ ಸರಕಾರವನ್ನು ಆಯ್ಕೆ ಮಾಡಿಕೊಳ್ಳಬೇಡಿ. ಬದಲಾವಣೆಯನ್ನು ಆಯ್ಕೆ ಮಾಡಿ. ಕಾಂಗ್ರೆಸ್ ಗೆ ಮತ ನೀಡಿ ಎಂದಿದ್ದಾರೆ.
हफ़्ता वसूली सरकार नहीं, परिवर्तन चुनिये !
— Mallikarjun Kharge (@kharge) April 20, 2024
कांग्रेस को वोट दें। #HaathBadlegaHalaat pic.twitter.com/XvL2HBppEF