ಪ್ರಧಾನಿ ಮೋದಿ ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆ ಕಳವಳಗೊಂಡಿದ್ದಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ Photo : twitter/INCIndia
ಐಜೋಲ್(ಮಿಜೋರಾಂ): ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕಿಂತ ಇಸ್ರೇಲ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಹೆಚ್ಚು ಕಳವಳಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ.
ಐಜೋಲ್ನ ರಸ್ತೆಗಳಲ್ಲಿ 2 ಕಿ.ಮೀ. ಪಾದಯಾತ್ರೆ ಕೈಗೊಂಡ ಬಳಿಕ ರಾಜಭವನದ ಸಮೀಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೆರೆಯ ಮಣಿಪುರ ಏಕೀಕೃತ ರಾಜ್ಯವಾಗಿ ಉಳಿದಿಲ್ಲ. ಬದಲಾಗಿದೆ, ಅದು ಜನಾಂಗೀಯ ನೆಲೆಯಲ್ಲಿ ಎರಡು ರಾಜ್ಯಗಳಾಗಿ ವಿಭಜನೆಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರಕಾರ ಇಸ್ರೇಲ್ ನಲ್ಲಿ ಏನು ಸಂಭವಿಸುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಹೊಂದಿದೆ. ಆದರೆ, ಜನರು ಹತ್ಯೆಗೀಡಾದ, ಮಹಿಳೆಯರು ಅತ್ಯಾಚಾರಕ್ಕೆ ಒಳಗಾದ, ಮಕ್ಕಳು ಕೊಲ್ಲಲ್ಪಟ್ಟ ಮಣಿಪುರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಆಸಕ್ತಿ ಇಲ್ಲ. ಇದು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಅವರು ಹೇಳಿದರು.
ಪರಸ್ಪರ ಗೌರವಿಸುವ, ಇತರರ ಚಿಂತನೆ, ಧರ್ಮ ಹಾಗೂ ಭಾಷೆಗಳನ್ನು ತಿಳಿದುಕೊಳ್ಳುವ ಹಾಗೂ ತನ್ನನ್ನು ತಾನು ಸಮಗ್ರವಾಗಿ ಪ್ರೀತಿಸುವ ಕಲ್ಪನೆಯನ್ನು ಭಾರತದ ಚಿಂತನೆ ಒಳಗೊಂಡಿದೆ. ಆದರೆ, ಭಾರತದ ಇಂತಹ ಚಿಂತನೆ ಬಿಜೆಪಿಯ ದಾಳಿಗೆ ಒಳಗಾಗಿದೆ ಎಂದು ಅವರು ಹೇಳಿದರು.
ಅವರು (ಬಿಜೆಪಿ) ವಿವಿಧ ಸಮುದಾಯ, ಧರ್ಮ ಹಾಗೂ ಭಾಷೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ದೇಶದಲ್ಲಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತಿದ್ದಾರೆ. ಅವರು ಅಹಂಕಾರ, ತಿಳಿವಳಿಕೆಯ ಕೊರತೆಯನ್ನು ಹರಡುತ್ತಿದ್ದಾರೆ. ಇದು ಭಾರತದ ಚಿಂತನೆಗೆ ಸಂಪೂರ್ಣ ವಿರುದ್ಧವಾದುದು ಎಂದು ರಾಹುಲ್ ಗಾಂಧಿ ಹೇಳಿದರು.