ಪ್ರಧಾನಿ ಮೋದಿ ಗಾಬರಿಗೊಂಡಿದ್ದಾರೆ, ಇನ್ನೆಂದೂ 400 ಸ್ಥಾನಗಳನ್ನು ಗೆಲ್ಲುವ ಕುರಿತು ಮಾತನಾಡುವುದಿಲ್ಲ: ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ (PTI)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರು ಹಂತಗಳ ಮತದಾನದ ನಂತರ ಅವರು ಗಾಬರಿಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಇನ್ನೆಂದಿಗೂ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗೆಲ್ಲುವ ಕುರಿತು ಮಾತನಾಡುವುದಿಲ್ಲ ಎಂದೂ ಅವರು ಗೇಲಿ ಮಾಡಿದ್ದಾರೆ.
ಆಜ್ತಕ್/ಇಂಡಿಯಾ ಟುಡೆ ಸುದ್ದಿ ಸಂಸ್ಥೆಗಳಿಗೆ ವಿಶೇಷ ಸಂದರ್ಶನ ನೀಡಿರುವ ಅಧೀರ್ ರಂಜನ್ ಚೌಧರಿ, "ಪ್ರಧಾನಿಯು ಗಾಬರಿಗೊಂಡಿದ್ದಾರೆ. ಅವರಿನ್ನೆಂದಿಗೂ 400 ಸ್ಥಾನಗಳನ್ನು ಗೆಲ್ಲುವ ಕುರಿತು ಮಾತನಾಡುವುದಿಲ್ಲ. ಅವರೀಗ ಮೌನಗೊಂಡಿದ್ದಾರೆ" ಎಂದು ಹೇಳಿದ್ದಾರೆ.
1999ರಿಂದ ಬೆಹರಂಪುರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬರುತ್ತಿರುವ ಅಧೀರ್ ರಂಜನ್ ಚೌಧರಿ, ಸತತ ಆರನೆಯ ಬಾರಿಯೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ತಮಗೆ ಯಾವುದೇ ಸ್ಪರ್ಧೆಯಿದೆ ಎಂಬ ಮಾತನ್ನು ತಳ್ಳಿ ಹಾಕಿದ್ದಾರೆ.
ಅಧೀರ್ ರಂಜನ್ ಚೌಧರಿ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ರನ್ನು ಕಣಕ್ಕಿಳಿಸಿದ್ದರೆ, ಬಿಜಿಪಿ ಅಭ್ಯರ್ಥಿಯಾಗಿ ನಿರ್ಮಲ್ ಕುಮಾರ್ ಸಹಾ ಸ್ಪರ್ಧಿಸುತ್ತಿದ್ದಾರೆ.
ಬೆಹರಂಪುರ್ ಲೋಕಸಭಾ ಕ್ಷೇತ್ರದಲ್ಲಿ ಮೇ 13ರಂದು ನಡೆಯಲಿರುವ ನಾಲ್ಕನೆಯ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.