ಪಹಲ್ಗಾಮ್ ದಾಳಿಯ ಚಿತ್ರಣ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ: ಪ್ರಧಾನಿ ಮೋದಿ
ʼಮನ್ ಕೀ ಬಾತ್ʼನಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ನನ್ನ ಮನಸ್ಸು ತೀವ್ರವಾಗಿ ನೊಂದಿದ್ದು, ದಾಳಿಯ ಚಿತ್ರಣ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ರವಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿರುವ ಭಯೋತ್ಪಾದಕರು ಹಾಗೂ ಆ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿರುವವರಿಗೆ ಸೂಕ್ತ ಶಿಕ್ಷೆಯನ್ನು ಒದಗಿಸಲಾಗುವುದು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತೀಯರ ಒಗ್ಗಟ್ಟೇ ದೇಶದ ಬಹು ದೊಡ್ಡ ಶಕ್ತಿಯಾಗಿದೆ ಎಂದೂ ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಮರು ಸ್ಥಾಪನೆಯಾಗುತ್ತಿರುವಾಗ, ಪ್ರವಾಸೋದ್ಯಮ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿರುವಾಗ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ ಹಾಗೂ ಕಾಶ್ಮೀರದ ಯುವಜನತೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿರುವ ಹೊತ್ತಿನಲ್ಲಿ ನಡೆದಿರುವ ಈ ಭಯೋತ್ಪಾದಕ ದಾಳಿಯು ಭಯೋತ್ಪಾದಕರು ಹಾಗೂ ಅವರನ್ನು ಪೋಷಿಸುವವರಲ್ಲಿನ ಹತಾಶೆ ಮತ್ತು ಹೇಡಿತನವನ್ನು ಬಿಂಬಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಭಾರತ ಮತ್ತು ಕಾಶ್ಮೀರದ ಶತ್ರುಗಳು ಇದನ್ನು ಬಯಸುವುದಿಲ್ಲ. ಹೀಗಾಗಿ, ಅವರಿಗೆ ಮತ್ತೆ ಕಾಶ್ಮೀರ ಕಣಿವೆಯನ್ನು ಹಾಳುಗೆಡವುದು ಬೇಕಿದೆ. ಭಯೋತ್ಪಾದನೆ ವಿರುದ್ಧದ ಈ ಸಮರದಲ್ಲಿ ದೇಶದ ಐಕ್ಯತೆ ಹಾಗೂ 140 ಕೋಟಿ ಭಾರತೀಯರ ಒಗ್ಗಟ್ಟು ನಮ್ಮ ಬಹು ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ಭಾರತ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಯೋತ್ಪಾದನೆ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಈ ಒಗ್ಗಟ್ಟು ಬಹು ದೊಡ್ಡ ಬುನಾದಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ವೇಳೆ, ಶುಕ್ರವಾರ ನಿಧನರಾದ ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಸಂಸ್ಥೆಯ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ನಿರ್ಮಾಣಕ್ಕಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಹಾಗೂ ಕೊಡುಗೆ ಎಂದಿಗೂ ಚಿರಸ್ಮರಣೀಯ ಎಂದು ಶ್ಲಾಘಿಸಿದ್ದಾರೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.