ಅಜ್ಮೀರ್ ಉರೂಸ್ ಗೆ 'ಚಾದರ್ʼ ಕಳುಹಿಸಿಕೊಟ್ಟ ಪ್ರಧಾನಿ ಮೋದಿ
ಅಜ್ಮೀರ್ ದರ್ಗಾದ ವಿರುದ್ಧ ಹಿಂದೂ ಸೇನೆ ಕೋರ್ಟ್ ಮೊರೆ ಬೆನ್ನಲ್ಲೇ ಬೆಳವಣಿಗೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅಜ್ಮೀರ್ ದರ್ಗಾಕ್ಕೆ 'ಚಾದರ್' ಅನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಅಜ್ಮೀರ್ ದರ್ಗಾದ ವಿಚಾರದಲ್ಲಿ ಹಿಂದೂ ಸೇನೆಯು ವಿವಾದವೆಬ್ಬಿಸಿ ಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಿ ಮೋದಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರಿಗೆ ಅಜ್ಮೀರ್ ಉರೂಸ್ ಹಿನ್ನೆಲೆ ಚಾದರ ಸಮರ್ಪಿಸುವ ಫೋಟೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿರಣ್ ರಿಜಿಜು ಅವರ ಪೋಸ್ಟ್ ನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಸಮಾರಂಭದ ಶುಭಾಶಯಗಳು. ಈ ಸಂದರ್ಭ ದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಬರೆದುಕೊಂಡಿದ್ದಾರೆ.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಗೆ ಉರೂಸು ಸಂದರ್ಭ ದಲ್ಲಿ ʼಚಾದರ್' ಅರ್ಪಿಸುವ ಸಂಪ್ರದಾಯವನ್ನು ಪ್ರಧಾನಿ ಮೋದಿ ಮುಂದುವರಿಸಿಕೊಂಡು ಬಂದಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜಮಾಲ್ ಸಿದ್ದಿಕಿ ಅವರು ಕಳೆದ ವರ್ಷ 812ನೇ ಉರೂಸ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಅನ್ನು ಅರ್ಪಿಸಿದ್ದರು. ಇದೀಗ 11ನೇ ಬಾರಿಗೆ ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಮೋದಿ ಚಾದರ್ ನ್ನು ಕಳುಹಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ಅಜ್ಮೀರ್ ದರ್ಗಾ ದಲ್ಲಿ ಶಿವನ ದೇವಾಲಯವಿದೆ ಎಂದು ಹಿಂದೂ ಸೇನಾ ಸಂಘಟನೆಯು ಅಜ್ಮೀರ್ ಜಿಲ್ಲಾ ನ್ಯಾಯಾಲಯದಲ್ಲಿ ಮೊರೆ ಹೋಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ 2024ರ ನವೆಂಬರ್ ನಲ್ಲಿ ನ್ಯಾಯಾಲಯ ಒಪ್ಪಿಕೊಂಡಿತ್ತು. ಈ ಬೆಳವಣಿಗೆಯು ಬಿಜೆಪಿ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು.