ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕಿತ್ತು : ರಾಹುಲ್ ಗಾಂಧಿ
ವಿಷಯಾಂತರ ಮಾಡುವುದು ಬೇಡ ಎಂದು ಪ್ರಶ್ನೆಗಳಿಗೆ ಅವಕಾಶ ನೀಡದ ವಿಪಕ್ಷ ನಾಯಕ
ರಾಹುಲ್ ಗಾಂಧಿ | PC : PTI
ಇಂಫಾಲ : ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕಿತ್ತು. ಇದು ಈ ನಿಮಿಷದ ಅಗತ್ಯವೂ ಹೌದು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗಲಭೆ ಪೀಡಿತ ಮಣಿಪುರದ ಜನರನ್ನು ಭೇಟಿ ಮಾಡಲು ಆಗಮಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಇಂಫಾಲದ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಾನು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಕ್ಯಾಂಪ್ ಗಳಲ್ಲಿಯೇ ಇರುವ ಸಂತ್ರಸ್ತರ ನೋವುಗಳನ್ನು ಕಂಡಿದ್ದೇನೆ. ಅವರೊಡನೆ ಮಾತನಾಡಿದ್ದೇನೆ. ಅವರಿಗೆ ಸಾಂತ್ವನ ಬೇಕಾಗಿದೆ. ಶಾಂತಿ ಬೇಕಾಗಿದೆ. ಮಣಿಪುರದಲ್ಲಿ ಶಾಂತಿ ಸ್ಥಾಪನೆ ಮಾಡುವುದೇ ನಮ್ಮ ಉದ್ದೇಶ. ಇಲ್ಲಿನ ನಮ್ಮ ಸಹೋದರರಿಗೆ ಸಾಂತ್ವನ ಹೇಳುವ ಕೆಲಸ ಮೊದಲು ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಣಿಪುರ ರಾಜ್ಯವು ಗಲಭೆಯ ಬಳಿಕ ಎರಡು ಭಾಗವಾಗಿದೆ. ಗಲಭೆ ಪೀಡಿತವಲ್ಲದಿದ್ದರೂ ಪ್ರಧಾನಿಯವರು ಮಣಿಪುರಕ್ಕೆ ಭೇಟಿ ಕೊಡಬೇಕಿತ್ತು. ಇಲ್ಲಿನ ಜನರಿಗೆ ಅವರ ಆಗಮನ ಒಂದಿಷ್ಟು ಸಾಂತ್ವನ ನೀಡುತ್ತಿತ್ತು ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.
ರಾಜಕೀಯ ಮಾಡಲು ನಾನು ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ಇದು ನನ್ನ ಮೂರನೇ ಭೇಟಿ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲೂ ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ. ಈ ಬಾರಿಯ ಭೇಟಿಯ ಸಂದರ್ಭ ಪರಿಸ್ಥಿತಿ ಸುಧಾರಣೆಯಾಗಿರಬಹುದು ಎಂಬ ಆಶಾಭಾವನೆಯಿತ್ತು. ಆದರೆ ಸುಧಾರಣೆಯಾಗಿಲ್ಲ ಎಂದು ತಿಳಿದು ಬೇಸರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಸಂತ್ರಸ್ತರ ಶಿಬಿರಗಳ ಭೇಟಿಯ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಅವರೊಡನೆ ಮಾತನಾಡುತ್ತಾ ಶಾಂತಿ ಸ್ಥಾಪನೆಗೆ ನಮ್ಮ ಸಹಕಾರ ಯಾವಾಗಲೂ ಇದೆ ಎಂದು ಭರವಸೆ ನೀಡಿದ್ದೇನೆ. ಮಣಿಪುರದಲ್ಲಿ ಶಾಂತಿ ಸ್ಥಾಪನೆ ಮಾಡುವ ಕೆಲಸ ಮೊದಲು ಮಾಡಬೇಕು ಎಂದು ರಾಹುಲ್ ಒತ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೋತ್ತರಗಳಿಗೆ ಉತ್ತರಿಸುವಂತೆ ಪತ್ರಕರ್ತರು ಆಗ್ರಹಿಸಿದಾಗ, ನಾನು ಪ್ರಶ್ನೆಗಳಿಗೆ ಉತ್ತರಿಸಲು ಇಲ್ಲಿಗೆ ಭೇಟಿ ನೀಡಿಲ್ಲ. ಪ್ರಶ್ನೆ ಕೇಳಿ ವಿಷಯಾಂತರ ಮಾಡುವುದು, ರಾಜಕೀಯ ಮಾಡುವುದು ಬೇಡ ಎಂದು ಸುದ್ದಿಗೋಷ್ಠಿ ಮುಗಿಸಿ ಹೊರನಡೆದರು.