ಪ್ರಮಾಣವಚನ ಬೆನ್ನಲ್ಲೇ ಇಂದು ಕರ್ತವ್ಯಕ್ಕೆ ಹಾಜರಾದ ಪ್ರಧಾನಿ ಮೋದಿ
ಪಿಎಂ ಕೃಷಿ ನಿಧಿಗೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ
Photo: ANI
ಹೊಸದಿಲ್ಲಿ: ರವಿವಾರ ಪ್ರಮಾಣವಚನ ಸ್ವೀಕಾರದ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸೌತ್ ಬ್ಲಾಕ್ ಕಚೇರಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ್ದಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂದು ತಮ್ಮ ಮೊದಲ ಫೈಲ್ಗೆ ಅವರು ಸಹಿ ಹಾಕಿದ್ದು ಇದು ರೈತ ಕಲ್ಯಾಣ ಯೋಜನೆಯಾದ “ಪಿಎಂ ಕಿಸಾನ್ ನಿಧಿ”ಗೆ ಸಂಬಂಧಿಸಿದ ಫೈಲ್ ಆಗಿದೆ. ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆ ಸಂಬಂಧಿಸಿದ ಫೈಲ್ ಇದಾಗಿದೆ. ಇದರನ್ವಯ ದೇಶದ 9.3 ಕೋಟಿ ರೈತರಿಗೆ ರೂ 20,000 ಕೋಟಿ ಬಿಡುಗಡೆಯಾಗುತ್ತಿದೆ.
ಸಂಸತ್ ಅಧಿವೇಶನ ನಡೆಸಲು ಸೂಚಿಸಲು ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೇಳಿಕೊಳ್ಳಲಿದೆ. ಈ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಸರ್ಕಾರದ ಧ್ಯೇಯೋದ್ದೇಶಗಳು ಮತ್ತು ಆದ್ಯತೆಗಳನ್ನು ವಿವರಿಸಲಿದ್ದಾರೆ.
ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೊರತಾಗಿ 30 ಕ್ಯಾಬಿನೆಟ್ ದರ್ಜೆಯ ಸಚಿವರು ಹಾಗೂ 36 ರಾಜ್ಯ ದರ್ಜೆಯ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.