ಈ ಚುನಾವಣೆಯಲ್ಲಿ ʼಮ್ಯಾಚ್ ಫಿಕ್ಸಿಂಗ್ʼ ಮಾಡಲು ಪ್ರಧಾನಿ ಮೋದಿ ಯತ್ನ: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ ‘ಪ್ರಜಾತಂತ್ರ ಉಳಿಸಿ’ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಬಾರಿಯ ಚುನಾವಣೆಗೆ ನರೇಂದ್ರ ಮೋದಿ ಅಂಪೈರ್ ಗಳನ್ನು ಆಯ್ಕೆ ಮಾಡಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ಮೇಲೆ ಒತ್ತಡ ಹೇರದೆ ಪ್ರಧಾನಿ ಮೋದಿಯ 400 ಸ್ಥಾನಗಳ ಘೋಷಣೆಯನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಅವರು ದೂರಿದರು.
“ದೇಶದ ಸಂವಿಧಾನವನ್ನು ಜನರ ಕೈಯಿಂದ ಕಸಿದುಕೊಳ್ಳಲು ಬಿಜೆಪಿಯು ಈ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದೆ” ಎಂದು ಅವರು ಹೇಳಿದರು.
“ಸಂವಿಧಾನ ಇಲ್ಲವಾದ ದಿನ ಭಾರತವು ಬದುಕುಳಿಯಲು ಸಾಧ್ಯವಿಲ್ಲ. ಇದು ಅವರ ಗುರಿಯಾಗಿದೆ. ಸಂವಿಧಾನವಿಲ್ಲದೆ ಪೊಲೀಸರು, ಬೆದರಿಕೆಗಳು ಹಾಗೂ ಒತ್ತಡದ ಮೂಲಕ ದೇಶವನ್ನು ನಡೆಸಬಹುದು ಎಂದು ಅವರು ತಿಳಿದಿದ್ದಾರೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
“ಆದರೆ, ಭಾರತೀಯರ ಧ್ವನಿಯನ್ನು ಹತ್ತಿಕ್ಕುವ ಯಾವ ಅಧಿಕಾರವೂ ಜಗತ್ತಿನಲ್ಲಿಲ್ಲ” ಎಂದು ಅವರು ಎಚ್ಚರಿಸಿದರು.