2014ರಿಂದ ಇಲ್ಲಿಯವರೆಗೆ ಯಾವುದೇ ರಜೆ ಪಡೆಯದ ಪ್ರಧಾನಿ ಮೋದಿ; RTI ಮಾಹಿತಿ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ರಜೆ ಪಡೆದಿಲ್ಲ ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆಯ ಅರ್ಜಿಯಿಂದ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಅರ್ಜಿಯನ್ನು ಸಲ್ಲಿಸಿದ್ದ ಪ್ರಫುಲ್ ಪಿ. ಸರ್ದಾ ಎಂಬುವವರು ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದಾರೆ ಮತ್ತು ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಎಷ್ಟು ದಿನ ವಿವಿಧ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎಂಬ ವಿವರ ಒದಗಿಸಿ ಎಂಬ ಎರಡು ಪ್ರಶ್ನೆಗಳನ್ನು ಕೇಳಿದ್ದರು. ಈ ಪೈಕಿ ಮೊದಲ ಪ್ರಶ್ನೆಗೆ, "ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಪ್ರತಿ ದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪದಗ್ರಹಣ ಮಾಡಿದಾಗಿನಿಂದ ಇಲ್ಲಿಯವರೆಗೆ ಯಾವುದೇ ರಜೆಯನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿಲ್ಲ" ಎಂಬ ಉತ್ತರ ದೊರೆತಿದೆ. ಎರಡನೆಯ ಪ್ರಶ್ನೆಗೆ, ಪ್ರಧಾನಿ ನರೇಂದ್ರ ಮೋದಿ ಈವರೆಗೆ 3,000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಬಹುತೇಕ ದಿನಕ್ಕೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿನ ಈ ಉತ್ತರವನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪರ್ವೇಶ್ ಕುಮಾರ್ ಒದಗಿಸಿದ್ದಾರೆ.