ಪ್ರಧಾನಿ ಮೋದಿಯವರ ವಿದೇಶ ಪ್ರವಾಸ ವೆಚ್ಚ ರೂ.258 ಕೋಟಿ 11 ವರ್ಷದ್ದಲ್ಲ, 2.5 ವರ್ಷದ್ದು

ನರೇಂದ್ರ ಮೋದಿಯವರು 11 ವರ್ಷಗಳ ವಿದೇಶ ಪ್ರವಾಸಕ್ಕೆ ರೂ. 258 ಕೋಟಿ ಖರ್ಚು ಮಾಡಲಾಗಿದೆ ಎಂದು ತಪ್ಪಾಗಿ ಹೇಳಿದ ಪೋಷ್ಟ್ ನ ಸ್ಕ್ರೀನ್ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಫ್ಯಾಕ್ಟ್ ಚೆಕ್ಸ್
ತೀರ್ಪು (ಸಂದರ್ಭದಿಂದ ಹೊರಗಿಡಲಾಗಿದೆ)
ವೈರಲ್ ಹೇಳಿಕೆಯು ಮನಮೋಹನ್ ಸಿಂಗ್ ಅವರ ೯ ವರ್ಷಗಳ ವಿದೇಶ ಪ್ರಯಾಣದ ವೆಚ್ಚವನ್ನು ಮೋದಿಯವರ ಎರಡೂವರೆ ವರ್ಷಗಳ ವೆಚ್ಚಗಳಿಗೆ ತಪ್ಪಾಗಿ ಹೋಲಿಸುತ್ತದೆ.
ಹೇಳಿಕೆ ಏನು?
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಒಂದು ಹೇಳಿಕೆಯ ಪ್ರಕಾರ, ಕಳೆದ ೧೧ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರಯಾಣ ವೆಚ್ಚ ೨೫೮ ಕೋಟಿ ರೂ. (ಸುಮಾರು $೩೦.೧ ಮಿಲಿಯನ್) ಆಗಿದ್ದು, ಅವರ ಪೂರ್ವವರ್ತಿ ಮನಮೋಹನ್ ಸಿಂಗ್ ಅವರ ೧೦ ವರ್ಷಗಳ ಅಧಿಕಾರಾವಧಿಯಲ್ಲಿ ವಿದೇಶ ಪ್ರಯಾಣ ವೆಚ್ಚ ರೂ. ೬೪೨ ಕೋಟಿ ಆಗಿದೆ.
ಈ ಹೇಳಿಕೆಯನ್ನು ಮೊದಲು ಮಿಸ್ಟರ್ ಸಿನ್ಹಾ ಎಂದು ಕರೆಯಲ್ಪಡುವ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ - ಅವರು ತಪ್ಪು ಮಾಹಿತಿಯನ್ನು ಹರಡುವ ಇತಿಹಾಸವನ್ನು ಹೊಂದಿದ್ದಾರೆ - ಮತ್ತು ನಂತರ ಹಲವಾರು ಇತರ ಬಳಕೆದಾರರು ಇದನ್ನು ವರ್ಧಿಸಿದ್ದಾರೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್ಶಾಟ್. (ಮೂಲ: ಎಕ್ಸ್/ಸ್ಕ್ರೀನ್ಶಾಟ್/ಲಾಜಿಕಲ್ ಫ್ಯಾಕ್ಟ್ಸ್ಗಳಿಂದ ಮಾರ್ಪಡಿಸಲಾಗಿದೆ)
ಆದರೆ, ಈ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ. ಉಲ್ಲೇಖಿಸಲಾದ ಮೊತ್ತಗಳು ನಿಖರವಾಗಿದ್ದರೂ, ಅವರು ಉಲ್ಲೇಖಿಸುವ ಸಮಯದ ಚೌಕಟ್ಟುಗಳು ನಿಜವಲ್ಲ.
ಮೋದಿಯವರ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚು ಮಾಡಲಾಗಿದೆ?
ಮೋದಿಯವರ ವಿದೇಶ ಪ್ರಯಾಣ ವೆಚ್ಚಗಳ ಕುರಿತು ಕೀವರ್ಡ್ ಹುಡುಕಾಟವು ರೂ. ೨೫೮ ಕೋಟಿ ಅಂಕಿ ಅಂಶವನ್ನು ಉಲ್ಲೇಖಿಸುವ ಬಹು ಸುದ್ದಿ ವರದಿಗಳನ್ನು ಕಂಡುಕೊಂಡೆವು. ಈ ವರದಿಗಳ ಪ್ರಕಾರ, ಈ ಮೊತ್ತವು ಮೇ ೨೦೨೨ ರಿಂದ ಡಿಸೆಂಬರ್ ೨೦೨೪ ರವರೆಗಿನ ಎರಡೂವರೆ ವರ್ಷಗಳ ಅವಧಿಯಲ್ಲಿ ಮಾಡಿದ ವೆಚ್ಚಗಳನ್ನು ಪ್ರತಿಬಿಂಬಿಸುತ್ತದೆ, ಇದು ೩೮ ಪ್ರವಾಸಗಳನ್ನು ಒಳಗೊಂಡಿದೆ - ವೈರಲ್ ಪೋಷ್ಟ್ ಗಳಲ್ಲಿ ಹೇಳಿರುವಂತೆ ಅವರು ಅಧಿಕಾರ ವಹಿಸಿಕೊಂಡ ನಂತರದ ೧೧ ವರ್ಷಗಳ ಅವಧಿಯಲ್ಲಿ ಅಲ್ಲ.
ಈ ವರದಿಗಳು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (ಎಂಓಎಸ್) ಪಬಿತ್ರ ಮಾರ್ಗರಿಟಾ ಅವರನ್ನು ಉಲ್ಲೇಖಿಸಿವೆ, ಅವರು ಮಾರ್ಚ್ ೨೦, ೨೦೨೫ ರಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿಯನ್ನು ಒದಗಿಸಿದ್ದಾರೆ. ನಾವು ಈ ಪ್ರತಿಕ್ರಿಯೆಯನ್ನು ಪಾರ್ಲಿಮೆಂಟ್ ಡಿಜಿಟಲ್ ಲೈಬ್ರರಿಯಲ್ಲಿ ಪರಿಶೀಲಿಸಿದ್ದೇವೆ, ಇದು ಮೇ ೨೦೨೨ ರಿಂದ ಡಿಸೆಂಬರ್ ೨೦೨೪ ರ ನಡುವಿನ ಅವಧಿಯಲ್ಲಿ ಮೋದಿಯವರ ವಿದೇಶ ಪ್ರಯಾಣದ ವೆಚ್ಚ ರೂ. ೨೫೮ ಕೋಟಿ ಎಂದು ದೃಢಪಡಿಸಿದೆ.
ಸಿಂಗ್ ಅವರ ವಿದೇಶ ಪ್ರಯಾಣದ ವೆಚ್ಚ
ಗೂಗಲ್ ಹುಡುಕಾಟವು ೨೦೧೩ ರಲ್ಲಿ ಸಲ್ಲಿಸಲಾದ ಮಾಹಿತಿ ಹಕ್ಕು (ಆರ್ಟಿಐ) ವಿನಂತಿಯ ಮೂಲಕ ಬಹಿರಂಗಗೊಂಡ ರೂ. ೬೪೨ ಕೋಟಿ ಅಂಕಿ ಅಂಶದ ಮೂಲವನ್ನು ನಮಗೆ ನೀಡಿದೆ. ಹಲವಾರು ಸುದ್ದಿ ವರದಿಗಳ ಪ್ರಕಾರ, ಪ್ರಧಾನ ಮಂತ್ರಿ ಕಚೇರಿಯು ಆರ್ಟಿಐಗೆ ಪ್ರತಿಕ್ರಿಯೆಯಾಗಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ೨೦೦೪ ಮತ್ತು ೨೦೧೩ ರ ನಡುವಿನ ಸಿಂಗ್ ಅವರ ಒಟ್ಟು ವಿದೇಶಿ ಪ್ರಯಾಣ ವೆಚ್ಚಗಳನ್ನು ಪ್ರತಿನಿಧಿಸುತ್ತದೆ - ಇದು ೬೭ ಪ್ರವಾಸಗಳನ್ನು ಒಳಗೊಂಡ ಒಂಬತ್ತು ವರ್ಷಗಳ ಅವಧಿಯಾಗಿದೆ.
ಮೇ ೨೦೦೪ ರಿಂದ ಮೇ ೨೦೧೪ ರವರೆಗಿನ ವೆಚ್ಚಗಳನ್ನು ವಿವರಿಸುವ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ೨೦೧೬ ರ ದಾಖಲೆಯೊಂದಿಗೆ ನಾವು ಈ ಮಾಹಿತಿಯನ್ನು ದೃಢೀಕರಿಸಿದ್ದೇವೆ.
ತೀರ್ಪು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಒಂಬತ್ತು ವರ್ಷಗಳ ಅವಧಿಯಲ್ಲಿನ ವಿದೇಶ ಪ್ರಯಾಣ ವೆಚ್ಚಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಎರಡೂವರೆ ವರ್ಷಗಳ ಅವಧಿಯಲ್ಲಿನ ವೆಚ್ಚಗಳೊಂದಿಗೆ ಹೋಲಿಸುವುದರಿಂದ ವೈರಲ್ ಹೇಳಿಕೆ ಸಂದರ್ಭರಹಿತವಾಗಿದೆ, ಎರಡೂ ಅಂಕಿಅಂಶಗಳು ೧೦ ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿವೆ ಎಂದು ತಪ್ಪಾಗಿ ಸೂಚಿಸುತ್ತದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.
ಈ ಲೇಖನವನ್ನು ಮೊದಲು 'logicallyfacts.com' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.