ಪುಟಿನ್, ಉಕ್ರೇನ್ಗೆ ಪ್ರಧಾನಿ ಮೋದಿ ನೀಡಿದ ಮಾರ್ಗದರ್ಶನದಿಂದ ಮೂರನೆಯ ವಿಶ್ವ ಯುದ್ಧ ತಪ್ಪಿತು: ಕಂಗನಾ ರಣಾವತ್
ಕಂಗನಾ ರಣಾವತ್ | PC : PTI
ಮಂಡಿ (ಹಿಮಾಲಯ ಪ್ರದೇಶ): ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಮಾರ್ಗದರ್ಶನದಿಂದ ಮೂರನೆಯ ವಿಶ್ವ ಯುದ್ಧ ನಡೆಯುವುದು ತಪ್ಪಿತು ಎಂದು ನಟಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಹೇಳಿದ್ದಾರೆ.
ಇತ್ತೀಚೆಗೆ ಆಯೋಜನೆಗೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿಯೂ ಆದ ಕಂಗನಾ ರಣಾವತ್, "ಪುಟಿನ್ರಿಂದ ಪ್ರಾರಂಭಗೊಂಡು, ಉಕ್ರೇನ್ ಜನತೆಯವರೆಗೆ ಪ್ರಧಾನಿ ನರೇಂದ್ರ ಮೋದಿಯವರತ್ತ ಅವರ ಮಾರ್ಗದರ್ಶನಕ್ಕಾಗಿ ನೋಡುತ್ತಿದ್ದರು. ಇದರಿಂದಾಗಿ, ಬಹುಶಃ ಇದೇ ಕಾರಣಕ್ಕಾಗಿ ಇಂದು ಮೂರನೆಯ ವಿಶ್ವ ಯುದ್ಧ ನಡೆಯುತ್ತಿಲ್ಲ" ಎಂದು ಹೇಳಿದ್ದಾರೆ.
"ಪ್ರಧಾನಿಯು ವಿಶ್ವದಲ್ಲಿನ ಶಾಂತಿಯ ಪರವಾಗಿ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇಂದು ಭಾರತಕ್ಕಿರುವ ವರ್ಚಸ್ಸನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ನಾವೀಗಲೂ ಯಾರಿಗೆ ಮತ ಚಲಾಯಿಸಬೇಕು ಎಂದು ಯೋಚಿಸಬೇಕೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಮೇ 14ರಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ತಮ್ಮ ನಾಮಪತ್ರ ಸಲ್ಲಿಸುವವರಿದ್ದಾರೆ.