ಪ್ರಧಾನಿ ಮೋದಿಯವರು ಹುತಾತ್ಮ ಯೋಧರ ಪತ್ನಿಯರ ಮಂಗಳಸೂತ್ರಗಳ ಲೆಕ್ಕ ಕೊಡಲಿ: ಸುಪ್ರಿಯಾ ಶ್ರಿನೇತ್ ಆಗ್ರಹ
ಸುಪ್ರಿಯಾ ಶ್ರಿನೇತ್ | PC : PTI
ಅಹಮದಾಬಾದ್: ಗುಜರಾತ್ ನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಂಗಳ ಸೂತ್ರ ಹಾಗೂ ಪಿತ್ರಾರ್ಜಿತ ಆಸ್ತಿಯ ಕುರಿತು ನೀಡುತ್ತಿರುವ ಹೇಳಿಕೆಗಳಿಗಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇತ್, ಎಲ್ಲ ಹುತಾತ್ಮ ಯೋಧರು ಹಾಗೂ ರೈತರ ಪತ್ನಿಯರ ಮಂಗಳ ಸೂತ್ರಗಳ ಲೆಕ್ಕವನ್ನು ಪ್ರಧಾನಿ ನರೇಂದ್ರ ಮೋದಿ ನೀಡಲಿ ಎಂದು ಆಗ್ರಹಿಸಿದರು.
ರವಿವಾರ ಇಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಸಂದರ್ಭದಲ್ಲಿ ಮಾತನಾಡಿದ ಸುಪ್ರಿಯಾ ಶ್ರಿನೇತ್, “ಕಾಂಗ್ರೆಸ್ ಪಕ್ಷವು ನಿಮ್ಮ ಕೋಣೆ, ನಿಮ್ಮ ಎಮ್ಮೆ ಹಾಗೂ ನಿಮ್ಮ ಮಂಗಳ ಸೂತ್ರವನ್ನು ಕಸಿದುಕೊಳ್ಳಲಿದೆ ಎಂದು ಜಾತಿ ಗಣತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಮಂಗಳ ಸೂತ್ರವು ಮಹಿಳೆಯ ಪಾಲಿಗೆ ಕೇವಲ ಆಭರಣವಲ್ಲದೆ, ಆಕೆಯ ಅಸ್ಮಿತೆ, ಜೀವನ ಹಾಗೂ ಧರ್ಮವಾಗಿದೆ. ನೀವು ಮಂಗಳ ಸೂತ್ರದ ಕುರಿತು ಮಾತನಾಡುತ್ತಿದ್ದೀರಿ. 55 ವರ್ಷಗಳ ಕಾಲ ಕಾಂಗ್ರೆಸ್ ಸರಕಾರಗಳೆಂದಿಗೂ ಕೋಣೆಗಳು, ಮಂಗಳ ಸೂತ್ರಗಳು, ಎಮ್ಮೆಗಳು ಅಥವಾ ಹಸುಗಳನ್ನು ಕಸಿದುಕೊಂಡು, ಅವನ್ನು ಇನ್ನಾರಿಗೋ ನೀಡಿಲ್ಲ” ಎಂದು ಕಿಡಿ ಕಾರಿದರು.
ಅಮೆರಿಕಾದಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆಯ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದ ಪ್ರಧಾನಿ ಮೋದಿ, “ನಿಮ್ಮ ಬಳಿ 10 ಎಕರೆ ಕೃಷಿ ಭೂಮಿಯಿದ್ದು, ಅದನ್ನು ನಿಮ್ಮ ಮಕ್ಕಳಿಗೆ ನೀಡಬೇಕೆಂದಿದ್ದರೆ, ಆ ಪೈಕಿ ಐದು ಎಕರೆಯನ್ನು ನೀವು ಸರಕಾರಕ್ಕೆ ನೀಡಬೇಕಾಗುತ್ತದೆ. ಎರಡು ಎಮ್ಮೆಗಳ ಪೈಕಿ ಒಂದು ಎಮ್ಮೆಯನ್ನು ಸರಕಾರಕ್ಕೆ ನೀಡಿ ಎಂದು ಕಾಂಗ್ರೆಸ್ ಹೇಳುತ್ತದೆ. ಇದು ಅವರ ಪ್ರಣಾಳಿಕೆ” ಎಂದು ಗುಜರಾತ್ ನಲ್ಲಿ ಆರೋಪಿಸಿದ್ದರು.
ಗಡಿಯಲ್ಲಿ ಜೀವ ತ್ಯಾಗ ಮಾಡಿದ ಯೋಧರು ಹಾಗೂ ರೈತರ ಜೀವ ನಷ್ಟದ ಕುರಿತೂ ಲೆಕ್ಕ ನೀಡುವಂತೆ ಆಗ್ರಹಿಸಿದ ಶ್ರಿನೇತ್, “ಓರ್ವ ಮಹಿಳೆಯಾಗಿ, ಗಾಲ್ವಾನ್ ನಲ್ಲಿ ಹುತಾತ್ಮರಾದ 20 ಯೋಧರ ಕುರಿತು ನಿಮ್ಮನ್ನು ಕೇಳಲು ಬಯಸುತ್ತೇನೆ. ನೀವು ಆ ಸಂದರ್ಭದಲ್ಲಿ ಯಾವುದೇ ಅತಿಕ್ರಮಣವಾಗಿಲ್ಲ ಎಂದು ಹೇಳಿದಿರಿ. ಆ 20 ಯೋಧರ ವಿಧವೆಯರ ಮಂಗಳ ಸೂತ್ರದ ಕತೆಯೇನು? ನಿಮ್ಮ ಮೂಗಿನಡಿಯೇ 700 ರೈತರು ಹುತಾತ್ಮರಾದರು. ಆ ರೈತರ ವಿಧವೆಯರ ಮಂಗಳ ಸೂತ್ರದ ಕತೆಯೇನು?” ಎಂದು ಅವರು ಪ್ರಶ್ನಿಸಿದರು.
“ನಿಮ್ಮ ಬಳಿ ಸೇನೆಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರು, ಮಣಿಪುರದ ಪುತ್ರಿಯರು ಹಾಗೂ ಸಹೋದರಿಯರು, ಹಣದುಬ್ಬರದ ಕಾರಣಕ್ಕೆ ತಮ್ಮ ಮಂಗಳ ಸೂತ್ರವನ್ನು ಅಡವಿಟ್ಟು ಕುಟುಂಬ ನಿರ್ವಹಿಸುತ್ತಿರುವ ಮಹಿಳೆಯರ ಮಂಗಳ ಸೂತ್ರದ ಬಗ್ಗೆ ಯಾವ ಲೆಕ್ಕವಿದೆ? ದೇಶಕ್ಕಾಗಿ ತಮ್ಮ ಆಭರಣಗಳನ್ನು ನೀಡಿದ ಇಂದಿರಾ ಗಾಂಧಿಯವರ ಕಾಂಗ್ರೆಸ್ ಎದುರು ನೀವು ಹೇಗೆ ಮಂಗಳ ಸೂತ್ರದ ಬಗ್ಗೆ ಮಾತನಾಡುತ್ತೀರಿ? ನೀವು ಹುತಾತ್ಮ ಯೋಧರ ವಿಧವೆಯರ ಮಂಗಳ ಸೂತ್ರದ ಕುರಿತು ಮಾತನಾಡುತ್ತಿದ್ದೀರಿ. ಆದರೆ, ನಮ್ಮ ಅತ್ಯಂತ ಗೌರವಾನ್ವಿತ ನಾಯಕಿ ದೇಶಕ್ಕಾಗಿ ತಮ್ಮ ಮಂಗಳ ಸೂತ್ರವನ್ನೇ ತ್ಯಾಗ ಮಾಡಿದ್ದು, ತಮ್ಮ ಬಹುತೇಕ ಜೀವನವನ್ನು ವಿಧವೆಯಾಗಿ ಕಳೆದಿದ್ದಾರೆ” ಎಂದು ಅವರು ಟೀಕಾಪ್ರಹಾರ ನಡೆಸಿದರು.
ದೇಶದಿಂದ ಏನನ್ನಾದರೂ ತೆಗೆದುಕೊಳ್ಳುವ ಬದಲು, ತನ್ನ 55 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷವು ದೇಶಕ್ಕೆ ನೀಡಿದೆ ಎಂದ ಅವರು, “ನಾವು ಸಣ್ಣ ಉದ್ಯಮಗಳನ್ನು ಬಹುರಾಷ್ಟ್ರೀಯ ಕಂಪನಿಗಳನ್ನಾಗಿ ಪರಿವರ್ತಿಸಿದೆವು, ಬಡತನದ ರೇಖೆಯಿಂದ 27 ಕೋಟಿ ಜನರನ್ನು ಮೇಲಕ್ಕೆ ತಂದೆವು, ಬಡವರು ಬಡತನದಿಂದ ಹೊರ ಬರುವ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ, ಸಣ್ಣ ಉದ್ಯಮಗಳು ದೊಡ್ಡ ಉದ್ಯಮಗಳಾಗುವ ನೀತಿಗಳನ್ನು ರೂಪಿಸಿದೆವು. ನೀವೇನು ಮಾಡಿದಿರಿ? ನೀವು ಸಣ್ಣ ಉದ್ಯಮಗಳ ಬಾಗಿಲನ್ನು ಮುಚ್ಚಿಸಿದಿರಿ ಹಾಗೂ ಇಬ್ಬರು ಮೂವರಿಗಾಗಿ ನೀತಿಗಳನ್ನು ರೂಪಿಸಿದಿರಿ” ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ವೈಖರಿಯನ್ನು ಟೀಕಿಸಿದ ಶ್ರೀನೇತ್, “ಕಳೆದ ಹತ್ತು ವರ್ಷಗಳಲ್ಲಿ ತಾವು ಮಾಡಿರುವ ಕೆಲಸದ ಮೇಲೆ ಪ್ರಧಾನಿ ಮೋದಿ ಮತ ಯಾಚಿಸಲಿದ್ದಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಅವರು ತಮ್ಮ ಬಗ್ಗೆಯೇ ಮಾತನಾಡುತ್ತಿಲ್ಲ. ಅವರು 2014ರ ಚಿತ್ರಕತೆಯನ್ನು 2024ರಲ್ಲೂ ಪುನರಾವರ್ತಿಸುತ್ತಿದ್ದು, ಕಾಂಗ್ರೆಸ್, ರಾಹುಲ್ ಗಾಂಧಿಯನ್ನು ಟೀಕಿಸುತ್ತಾ, ನೆಹರೂ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.