'ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ನೂರು ಪಟ್ಟು ಹಿಂದಿರುಗಿಸುತ್ತೇನೆ: ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ | PTI
ಹೊಸದಿಲ್ಲಿ: "ನಿಮ್ಮ ಋಣ ನಮ್ಮ ಮೇಲಿದೆ. ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ನೂರು ಪಟ್ಟು ಹಿಂದಿರುಗಿಸುತ್ತೇವೆ”, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜನಾದೇಶಕ್ಕಾಗಿ ದಿಲ್ಲಿಯ ಜನರಿಗೆ ಧನ್ಯವಾದ ಹೇಳಿದ ಮೋದಿ, " ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ನಾನು ದಿಲ್ಲಿಯ ಜನರನ್ನು ಕೇಳಿಕೊಂಡಿದ್ದೆ. ನಾವು ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ನೂರು ಪಟ್ಟು ಹಿಂದಿರುಗಿಸುತ್ತೇವೆ. ದಿಲ್ಲಿಯ ಡಬಲ್ ಎಂಜಿನ್ ಸರ್ಕಾರವು ದಿಲ್ಲಿಯನ್ನು ಎರಡು ಪಟ್ಟು ವೇಗವಾಗಿ ಅಭಿವೃದ್ಧಿಪಡಿಸುವ ಮೂಲಕ ನಿಮ್ಮ ಋಣ ತೀರಿಸುತ್ತೇವೆ” ಎಂದರು.
“ದಿಲ್ಲಿ ಜನರಿಗೆ ಈಗ ಆಪ್ ನಿಂದ ನೆಮ್ಮದಿ ಸಿಕ್ಕಿದೆ. ನಾನು ನಿಮಗೆ ಪತ್ರ ಬರೆದಿದ್ದೆ. ನೀವು ಅದನ್ನು ಅವರಿಗೆ ತಲುಪಿಸಿದ್ದೀರಿ. ದಿಲ್ಲಿಯ ಮಾಲೀಕರು ಎಂಬ ಅಹಂಕಾರ ಹೊಂದಿದ್ದವರನ್ನು ಸತ್ಯದೊಂದಿಗೆ ಎದುರಿಸಲಾಗಿದೆ. ದಿಲ್ಲಿಯ ನಿಜವಾದ ಮಾಲೀಕರು ಇಲ್ಲಿನ ಜನರು, ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ರಾಜಕೀಯದಲ್ಲಿ ಸುಳ್ಳು ಮತ್ತು ವಂಚನೆಗೆ ಸ್ಥಾನವಿಲ್ಲ ಎಂಬದು ಈ ವಿಧಾನಸಭಾ ತೀರ್ಪಿನಿಂದ ಬಹಿರಂಗವಾಗಿದೆ ಎಂದ ಪ್ರಧಾನಿ, ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯ ಜನರು ನನ್ನನ್ನು ಎಂದಿಗೂ ನಿರಾಶೆಗೊಳಿಸಿಲ್ಲ. ಮೂರು ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಏಳು ಸ್ಥಾನಗಳಲ್ಲಿಯೂ ಬಿಜೆಪಿಗೆ ಮತ ನೀಡಿದ್ದಾರೆ. 100% ಯಶಸ್ಸನ್ನು ಪಡೆದ ನಂತರವೂ, ನಮ್ಮ ಕಾರ್ಯಕರ್ತರಿಗೆ ದಿಲ್ಲಿಗೆ ಸಂಪೂರ್ಣವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಆಸೆಯನ್ನು ದಿಲ್ಲಿ ಈ ಬಾರಿ ಈಡೇರಿಸಿದೆ, ಎಂದರು