ನೆಹರೂರ ಪತ್ರಗಳನ್ನು ಮರಳಿಸುವಂತೆ ಗಾಂಧಿ ಕುಟುಂಬಕ್ಕೆ ಪತ್ರ ಬರೆದಿಲ್ಲ: ಪಿಎಂಎಂಎಲ್ ಸೊಸೈಟಿ ಸ್ಪಷ್ಟನೆ
PC : ANI
ಹೊಸದಿಲ್ಲಿ: ವಸ್ತು ಸಂಗ್ರಹಾಲಯದಿಂದ ವಾಪಸ್ ಪಡೆದುಕೊಂಡಿರುವ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಮರಳಿಸುವಂತೆ ಕೋರಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಜೊತೆಗೆ ಯಾವುದೇ ಪತ್ರ ವ್ಯವಹಾರ ನಡೆಸಿರುವುದನ್ನು ಪ್ರಧಾನ ಮಂತ್ರಿಗಳ ಮ್ಯೂಝಿಯಂ ಮತ್ತು ಲೈಬ್ರರಿ ಸೊಸೈಟಿ(ಪಿಎಂಎಂಎಲ್)ಯು ನಿರಾಕರಿಸಿದೆ.
ಸಂಸ್ಥೆಯು ಗಾಂಧಿ ಕುಟುಂಬಕ್ಕೆ ಯಾವುದೇ ಪತ್ರಗಳನ್ನು ಬರೆದಿಲ್ಲ ಎಂದು ಪಿಎಂಎಂಎಲ್ ನಿರ್ದೇಶಕ ಸಂಜೀವ ನಂದನ ಸಹಾಯ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಇತ್ತೀಚಿಗೆ ಇತಿಹಾಸಕಾರ ಮತ್ತು ಪಿಎಂಎಂಎಲ್ ಸೊಸೈಟಿಯ ಸದಸ್ಯ ರಿಝ್ವಾನ್ ಕಾದ್ರಿ ಅವರು, ವಸ್ತುಸಂಗ್ರಹಾಲಯದಲ್ಲಿ ನೆಹರೂ ಸಂಗ್ರಹಗಳ ಭಾಗವಾಗಿದ್ದ ದಾಖಲೆಗಳನ್ನು ಮರಳಿ ಪಡೆದುಕೊಳ್ಳಲು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಸಹಕಾರ ಕೋರಿದ್ದರು.
ನೆಹರೂ ಅವರು ಲೇಡಿ ಮೌಂಟ್ಬ್ಯಾಟನ್ರಿಗೆ ಬರೆದಿದ್ದ ಪತ್ರಗಳು ಸೇರಿದಂತೆ ದೇಶದ ಮೊದಲ ಪ್ರಧಾನಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು 2008ರಲ್ಲಿ ಸೋನಿಯಾ ಗಾಂಧಿಯವರ ಸೂಚನೆಯ ಮೇರೆಗೆ ಹಿಂದೆಗೆದುಕೊಳ್ಳಲಾಗಿತ್ತು ಎಂದು ಕಾದ್ರಿ ಹೇಳಿದ್ದರು.
ವಿಷಯವು ಸೋಮವಾರ ಲೋಕಸಭೆಯಲ್ಲಿಯೂ ಪ್ರಸ್ತಾವಗೊಂಡಿದ್ದು,ಭಾರತದ ಇತಿಹಾಸವನ್ನು ತಿಳಿದುಕೊಳ್ಳಲು ಈ ದಾಖಲೆಗಳು ಮಹತ್ವದ್ದಾಗಿವೆ ಎಂದು ಹೇಳಿದ್ದ ಬಿಜೆಪಿ ಸಂಸದ ಸಂಬಿತ ಪಾತ್ರಾ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ದಾಖಲೆಗಳನ್ನು ವಸ್ತುಸಂಗ್ರಹಾಲಯಕ್ಕೆ ಮರಳಿ ತರುವಂತೆ ಸಂಸ್ಕೃತಿ ಸಚಿವಾಲಯವನ್ನು ಕೋರಿಕೊಂಡಿದ್ದರು.
ಪ್ರಸ್ತಾವಿತ ದಾಖಲೆಗಳನ್ನು ವಸ್ತುಸಂಗ್ರಹಾಲಯಕ್ಕೆ ಮರಳಿಸುವಂತೆ ಕೋರಿ ತಾನು ಸೆಪ್ಟಂಬರ್ನಲ್ಲಿ ಸೋನಿಯಾ ಗಾಂಧಿಯವರಿಗೆ ವೈಯಕ್ತಿಕ ಪತ್ರವನ್ನು ಬರೆದಿದ್ದೆ. ಆದರೆ ಅವರು ಉತ್ತರಿಸದ್ದರಿಂದ ಡಿ.10ರಂದು ರಾಹುಲ್ ಗಾಂಧಿಯವರಿಗೆ ಇಂತಹುದೇ ಕೋರಿಕೆಯೊಂದಿಗೆ ಪತ್ರವನ್ನು ಬರೆದಿದ್ದೆ ಎಂದು ಕಾದ್ರಿ ಸುದ್ದಿಸಂಸ್ಥೆಗೆ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಾತ್ರಾ,ದಾಖಲೆಗಳು ಯಾವುದೇ ವ್ಯಕ್ತಿಯ ಅಥವಾ ಕುಟುಂಬದ ಖಾಸಗಿ ಆಸ್ತಿಯಲ್ಲ,ಆದರೆ ಈ ಐತಿಹಾಸಿಕ ದಾಖಲೆಗಳು ಭಾರತದ ‘ಸಂಪತ್ತಿನ’ ಭಾಗವಾಗಿವೆ ಮತ್ತು ಅವುಗಳನ್ನು ವಾಪಸ್ ಮಾಡಲೇಬೇಕು ಎಂದು ಆಗ್ರಹಿಸಿದ್ದರು.
ಪಾತ್ರಾರ ಆಗ್ರಹವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟಾಗೋರ್,‘ಗೋಡ್ಸೆಯ ಮೊಮ್ಮಕ್ಕಳಿಗೆ ಗಾಂಧಿ ಕುಟುಂಬದಿಂದ ನೆಹರೂ ಪತ್ರಗಳು ಏಕೆ ಬೇಕು? ಏನಿದು ದಿಢೀರ್ ಆಸಕ್ತಿ? ಸಂಘಿಗಳು ನೆಹರೂ ಬಗ್ಗೆ ಸುಳ್ಳುಗಳು ಮತ್ತು ನಕಲಿ ಕಥೆಗಳನ್ನು ಹರಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿದೆ ’ ಎಂದು ಎಕ್ಸ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.