ವಾಟ್ಸ್ಆ್ಯಪ್ ಮೂಲಕ ಬಂಧನ-ಪೂರ್ವ ನೋಟಿಸ್ಗಳನ್ನು ನೀಡುವುದನ್ನು ನಿಲ್ಲಿಸುವಂತೆ ಪೋಲಿಸರಿಗೆ ಸುಪ್ರೀಂ ಆದೇಶ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ನ್ಯಾಯಾಲಯಗಳ ಕಲಾಪಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಪ್ರಗತಿಯಾಗಿದ್ದರೂ ಸರ್ವೋಚ್ಚ ನ್ಯಾಯಾಲಯವು, ಪೋಲಿಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್ಪಿಸಿಯ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 35ರಡಿ ವಾಟ್ಸ್ಆ್ಯಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್ಗಳನ್ನು ಕಳುಹಿಸುವಂತಿಲ್ಲ ಎಂದು ತೀರ್ಪು ನೀಡಿದೆ.
ಗಂಭೀರ ಅಪರಾಧಗಳ ತನಿಖೆ ನಡೆಸುವ ಪೋಲಿಸ್ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿ ಶಂಕಿತ ವ್ಯಕ್ತಿಗಳಿಗೆ ವಿಧ್ಯುಕ್ತ ನೋಟಿಸ್ ಹೊರಡಿಸುವುದನ್ನು ಈ ಕಲಮ್ಗಳು ಅಗತ್ಯವಾಗಿಸಿವೆ. ಶಂಕಿತ ವ್ಯಕ್ತಿಗಳು ತನಿಖೆಗೆ ಸಹಕರಿಸಿದರೆ ಅವರನ್ನು ಬಂಧಿಸುವಂತಿಲ್ಲ.
ಈ ಹಿಂದೆ ಪೋಲಿಸ್ ಅಧಿಕಾರದ ದುರ್ಬಳಕೆಯನ್ನು ಟೀಕಿಸಿದ್ದ ಪ್ರತಿಪಕ್ಷಗಳು ಕಲಂ 41ಎ ಅಡಿ ನೋಟಿಸ್ಗಳನ್ನು ಹೊರಡಿಸುವ ಪ್ರಕ್ರಿಯೆಯನ್ನು ಅನುಸರಿಸದೆ ಬಂಧನಗಳನ್ನು ನಡೆಸಲಾಗಿದೆ ಎಂದು ಪ್ರತಿಪಾದಿಸಿದ್ದವು.
ಅಮಿಕಸ್ ಕ್ಯೂರೆ ಹಾಗೂ ಹಿರಿಯ ನ್ಯಾಯವಾದಿ ಸಿದ್ಧಾರ್ಥ ಲೂಥ್ರಾ ಅವರ ಶಿಫಾರಸುಗಳನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು, ಸಿಆರ್ಪಿಸಿ,1973/ಬಿಎನ್ಎಸ್ಎಸ್, 2023ಯಲ್ಲಿ ಗುರುತಿಸಲಾಗಿರುವ ಮತ್ತು ಸೂಚಿಸಲಾಗಿರುವ ವಿಧಾನಗಳ ಮೂಲಕ ಮಾತ್ರ ಸಿಆರ್ಪಿಸಿಯ ಕಲಂ 41ಎ/ಬಿಎನ್ಎಸ್ಎಸ್ನ ಕಲಂ 35ರಡಿ ನೋಟಿಸ್ಗಳನ್ನು ಹೊರಡಿಸುವಂತೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪೋಲಿಸ್ ಇಲಾಖೆಗಳಿಗೆ ಸ್ಥಾಯಿ ಆದೇಶವನ್ನು ನೀಡಬೇಕು. ವಾಟ್ಸ್ಆ್ಯಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ನೋಟಿಸ್ಗಳನ್ನು ಹೊರಡಿಸುವುದನ್ನು ಸಿಆರ್ಪಿಸಿ,1973/ಬಿಎನ್ಎಸ್ಎಸ್, 2023ಯಲ್ಲಿ ಗುರುತಿಸಲಾಗಿರುವ ಮತ್ತು ಸೂಚಿಸಲಾಗಿರುವ ವಿಧಾನಗಳಿಗೆ ಪರ್ಯಾಯವಾಗಿ ಅಥವಾ ಬದಲಿಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿತು.
ಏಳು ವರ್ಷಗಳಿಗೂ ಕಡಿಮೆ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧಗಳಿಗಾಗಿ ಪೋಲಿಸರು ಸಿಆರ್ಪಿಸಿಯ ಕಲಂ 41ಎ ಅಡಿ ಕಡ್ಡಾಯ ನೋಟಿಸ್ ಕಾರ್ಯವಿಧಾನವನ್ನು ಅನುಸರಿಸದೆ ವ್ಯಕ್ತಿಗಳನ್ನು ಬಂಧಿಸುವುದನ್ನು ನಿಷೇಧಿಸಿರುವ ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಲೂಥ್ರಾ ಉಲ್ಲೇಖಿಸಿದರು.
ಜಾಮೀನು ಬಾಂಡ್ ಅಥವಾ ಭದ್ರತೆಗಳನ್ನು ಒದಗಿಸಲು ಸಾಧ್ಯವಾಗದ ಬಡ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದಂತೆ ಲೂಥ್ರಾ,ಇಂತಹ ಕೈದಿಗಳು ವೈಯಕ್ತಿಕ ಬಾಂಡ್ಗಳೊಂದಿಗೆ ತಮ್ಮ ದೃಢೀಕೃತ ಆಧಾರ್ ಕಾರ್ಡ್ಗಳನ್ನು ಸಲ್ಲಿಸಿದರೆ ಅವರನ್ನು ಬಿಡುಗಡೆಗೊಳಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ತಾತ್ವಿಕ ಒಪ್ಪಿಗೆಯನ್ನು ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.