ಉತ್ತರ ಪ್ರದೇಶ | ಚೀನಾ ಮಾಂಜಾ ದಾರ ಕುತ್ತಿಗೆ ಸುತ್ತಿ ಪೊಲೀಸ್ ಕಾನ್ಸ್ಟೇಬಲ್ ಮೃತ್ಯು
ಸಾಂದರ್ಭಿಕ ಚಿತ್ರ
ಶಹಜಹಾನ್ಪುರ್: ಶನಿವಾರ ಮೋಟಾರ್ ಬೈಕ್ ಓಡಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಕುತ್ತಿಗೆಗೆ ಗಾಳಿಪಟದ ಚೀನಾ ಮಾಂಜಾ ದಾರ ಸುತ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊತ್ಚಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಝೀಝ್ಗಂಜ್ನಲ್ಲಿ ಮೋಟಾರ್ ಬೈಕ್ ಓಡಿಸುತ್ತಿದ್ದ 28 ವರ್ಷದ ಪೊಲೀಸ್ ಕಾನ್ಸ್ಟೇಬಲ್ ಶಾರೂಖ್ ಖಾನ್ ಕುತ್ತಿಗೆಗೆ ಗಾಳಿ ಪಟದ ದಾರ ಸುತ್ತಿ ಅವರು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನಗರ) ಸಂಜಯ್ ಕುಮಾರ್ ಸಾಗರ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಕುತ್ತಿಗೆ ಕುಯ್ದು ಹೋಗಿದ್ದರಿಂದ, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಶಾರೂಖ್ ಖಾನ್ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದು, ಅಮ್ರೋಹಾ ಜಿಲ್ಲೆಯ ನಿವಾಸಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಚೀನಾ ಮಾಂಜಾ ದಾರಗಳನ್ನು ನಿಷೇಧಿಸಲಾಗಿದ್ದರೂ, ಅವನ್ನು ಗೋಪ್ಯವಾಗಿ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ನಾನು ತಂಡವೊಂದನ್ನು ರಚಿಸಿದ್ದು, ಗೋಪ್ಯವಾಗಿ ಚೀನಾ ಮಾಂಜಾ ದಾರ ಮಾರಾಟ ಮಾಡುತ್ತಿರುವವರ ವಿರುದ್ಧ ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.