ತಮಿಳುನಾಡು BSP ಮುಖ್ಯಸ್ಥನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು
ಚಿನ್ನ ಹಗರಣ, ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ
ಕೆ. ಆರ್ಮ್ಸ್ಟ್ರಾಂಗ್ (Photo:X/Nabila Jamal)
ಚೆನ್ನೈ: ತಮಿಳುನಾಡು ಬಿಎಸ್ಪಿ ಘಟಕದ ಮುಖ್ಯಸ್ಥ ಕೆ. ಆರ್ಮ್ಸ್ಟ್ರಾಂಗ್ ಹತ್ಯೆಯನ್ನು ಕಳೆದ ವರ್ಷ ನಡೆದಿದ್ದ ಭೂಗತ ಪಾತಕಿ ಅರ್ಕಾಟ್ ಸುರೇಶ್ ಹತ್ಯೆಗೆ ಪ್ರತೀಕಾರವಾಗಿ ನಡೆಸಲಾಗಿದೆ ಎಂಬ ಸಂಗತಿ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಚೆನ್ನೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
47 ವರ್ಷದ ಆರ್ಮ್ಸ್ಟ್ರಾಂಗ್ ನನ್ನು ಶುಕ್ರವಾರ ಸಂಜೆ ಚೆನ್ನೈನ ಪೆರಂಬದೂರು ಬಳಿ ಆರು ಜನರ ಗುಂಪೊಂದು ಇರಿದು ಹತ್ಯೆಗೈದಿತ್ತು.
ವೆಲ್ಲೋರ್ ನ ನಿವಾಸಿಯಾದ ಸುರೇಶ್ ದಲಿತನಾಗಿದ್ದು, ಪೆರಂಬದೂರಿನಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದ. ಆದರೆ, ಆತ ಮತ್ತು ಆರ್ಮ್ಸ್ಟ್ರಾಂಗ್ ನಡುವೆ ವೈಷಮ್ಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆರ್ಥಿಕ ಹಗರಣವೊಂದರಲ್ಲಿ ಭಾಗಿಯಾಗಿದ್ದ ಚಿನ್ನದ ವ್ಯಾಪಾರ ಸಂಸ್ಥೆಯೊಂದು ಸೆಪ್ಟೆಂಬರ್ 2020ರಿಂದ ಮೇ 2022ರ ನಡುವೆ ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚಿಸಿ, ರೂ. 2,438 ಕೋಟಿ ಹಗರಣ ನಡೆಸಿತ್ತು. ಈ ಸಂಸ್ಥೆಯ ಬೆನ್ನಿಗೆ ಸುರೇಶ್ ನಿಂತಿದ್ದ. ಆದರೆ, ಈ ಹಗರಣದಲ್ಲಿ ಹಣ ಕಳೆದುಕೊಂಡಿದ್ದ ಕೆಲವು ವ್ಯಕ್ತಿಗಳ ಬೆಂಬಲಕ್ಕೆ ನಿಂತಿದ್ದ ಆರ್ಮ್ಸ್ಟ್ರಾಂಗ್, ಅವರ ಹಣವನ್ನು ಮರಳಿ ಕೊಡಿಸುವ ಭರವಸೆ ನೀಡಿದ್ದರು. ಇದರಿಂದ ಇಬ್ಬರ ನಡುವೆ ಹಗೆತನ ಪ್ರಾರಂಭವಾಗಿತ್ತು ಎಂದು ಹೇಳಲಾಗಿದೆ.
ಇದಾದ ನಂತರ, ಸುರೇಶ್ ರನ್ನು ಜಯಪಾಲ್ ನೇತೃತ್ವದ ತಂಡವೊಂದು ಹತ್ಯೆಗೈದಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಆರ್ಮ್ಸ್ಟ್ರಾಂಗ್ ಆದೇಶದ ಮೇರೆಗೆ ಸುರೇಶ್ ನನ್ನು ಜಯಪಾಲ್ ಹತ್ಯೆಗೈದಿದ್ದಾನೆ ಎಂದು ಹಂತಕರು ಭಾವಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಜಯಪಾಲ್ ಸದ್ಯ ಜೈಲಿನಲ್ಲಿದ್ದಾನೆ. ಹೂಡಿಕೆದಾರರ ಹಣವನ್ನು ಮರಳಿ ಕೊಡಿಸಲು ಅವರಿಂದ ಕಮಿಷನ್ ಪಡೆಯುತ್ತಿದ್ದ ಆರೋಪವೂ ಜಯಪಾಲ್ ಮೇಲಿದೆ. ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸುರೇಶ್ ಸಹೋದರ ಬಾಲುವನ್ನು ಬಂಧಿಸಲಾಗಿದೆ. ಶುಕ್ರವಾರ ಆರ್ಮ್ಸ್ಟ್ರಾಂಗ್ ರನ್ನು ಹತ್ಯೆಗೈದ ತಂಡದ ನೇತೃತ್ವವನ್ನು ಬಾಲು ವಹಿಸಿದ್ದ ಎಂಬ ಆರೋಪವಿದೆ” ಎಂದು ತಿಳಿಸಿದ್ದಾರೆ.
ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಸುರೇಶ್ ಸಹೋದರ ಪೊನ್ನೈ ವಿ. ಬಾಲು (39), ಡಿ.ರಾಮು (38), ಕೆ.ತಿರುವೆಂಗಟಮ್ (33), ಎಸ್.ತಿರುಮಲೈ (45), ಡಿ.ಸೆಲ್ವರಾಜ್ (48), ಜಿ.ಅರುಳ್ (33), ಕೆ.ಮಣಿವಣ್ಣನ್ (25) ಹಾಗೂ ಜೆ.ಸಂತೋಷ್ (22) ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.