ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಯ ಬಂಧನ ಕಾನೂನು ಬಾಹಿರ: ಬಾಂಬೆ ಹೈಕೋಟ್
ಬಾಂಬೆ ಹೈಕೋಟ್ | PC : PTI
ಮುಂಬೈ : ಹತ್ಯೆ ಪ್ರಕರಣದಲ್ಲಿ ದೋಷಪೂರ್ಣ ತನಿಖೆಗಾಗಿ ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ನನ್ನು ಬಂಧಿಸಿರುವುದು ಕಾನೂನು ಬಾಹಿರ ಎಂದು ಬಾಂಬೆ ಉಚ್ಚ ನ್ಯಾಯಾಲಯ ಹೇಳಿದೆ. ಅಲ್ಲದೆ, ಅವರಿಗೆ ಪರಿಹಾರವಾಗಿ 2 ಲಕ್ಷ ರೂ. ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿದೆ.
ತನ್ನನ್ನು ಬಂಧಿಸಿದ ಸತಾರಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿರುದ್ಧ ತನಿಖೆ ಕೋರಿ ಪೊಲೀಸ್ ಅಧಿಕಾರಿ ಸಂಭಾಜಿ ಪಾಟೀಲ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕೂಡ ಅವರು ಕೋರಿದ್ದರು.
2009ರಲ್ಲಿ ನಡೆಸಿದ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಾಕ್ಷ್ಯಗಳ ನಾಶ ಹಾಗೂ ಉದ್ದೇಶಪೂರ್ವಕವಾಗಿ ದೋಷಪೂರಿತ ವರದಿ ಸಿದ್ಧಪಡಿಸಿದ ಆರೋಪದಲ್ಲಿ ಪಾಟೀಲ್ ಅವರನ್ನು 2013 ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಬಂಧನದ ಒಂದು ದಿನದ ಬಳಿಕ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.
ಬಂಧನದ ಅಧಿಕಾರವನ್ನು ಎಚ್ಚರಿಕೆಯಿಂದ ಬಳಸಲಾಗಿಲ್ಲ ಹಾಗೂ ಪೊಲೀಸ್ ಅಧಿಕಾರಿಯನ್ನು ಕಾನೂನು ಬಾಹಿರ ರೀತಿಯಲ್ಲಿ ಬಂಧಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಚಂದ್ರಶೇಖರ್ ಹಾಗೂ ರಾಜೇಶ್ ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೋಮವಾರ ಹೇಳಿದೆ.