ಚುನಾವಣೆಗಳು ಮೋದಿ ಕೈಯಿಂದ ಜಾರುತ್ತಿವೆ, ಇನ್ನು ನಾಲ್ಕೈದು ದಿನದಲ್ಲಿ ಅವರು ಒಂದಿಷ್ಟು ನಾಟಕ ಮಾಡಲಿದ್ದಾರೆ: ರಾಹುಲ್ ಗಾಂಧಿ
Photo: PTI
ಹೊಸದಿಲ್ಲಿ: ಚುನಾವಣೆಗಳು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಜಾರುತ್ತಿರುವುದರಿಂದ, ಅವರು ಇನ್ನು ನಾಲ್ಕೈದು ದಿನಗಳಲ್ಲಿ ಒಂದಿಷ್ಟು ನಾಟಕವಾಡಬಹುದು ಎಂದು ಗುರುವಾರ ಭವಿಷ್ಯ ನುಡಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದರಿಂದ ಯುವಕರು ತಮ್ಮ ಗಮನದಿಂದ ವಿಮುಖರಾಗಬಾರದು ಎಂದು ಕರೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಖಾತೆಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ದೇಶದ ಶಕ್ತಿ ದೇಶದ ಯುವಕರಾಗಿದ್ದಾರೆ. ಚುನಾವಣೆಗಳು ನರೇಂದ್ರ ಮೋದಿಯವರ ಕೈಯಿಂದ ಜಾರತೊಡಗಿದೆ. ಅವರೂ ಜಾರುತ್ತಿದ್ದು, ಅವರು ಮತ್ತೆ ಭಾರತದ ಪ್ರಧಾನಿಯಾಗುವುದಿಲ್ಲ. ಅವರು ಒಂದಿಷ್ಟು ನಾಟಕಗಳೊಂದಿಗೆ ಮುಂದಿನ ನಾಲ್ಕೈದು ದಿನಗಳಲ್ಲಿ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ನಿರ್ಧರಿಸಿದ್ದಾರೆ. ನೀವು ಗಮನದಿಂದ ವಿಮುಖರಾಗುವಂತಿಲ್ಲ; ನಿರುದ್ಯೋಗ ಬಹು ದೊಡ್ಡ ಸಮಸ್ಯೆಯಾಗಿದೆ. ನಾನು ಯುವಕರಿಗೆ ಎರಡು ಕೋಟಿ ಉದ್ಯೋಗಗಳನ್ನು ನೀಡುತ್ತೇನೆ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅವರು ಸುಳ್ಳು ಹೇಳಿದರು, ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿಯನ್ನು ಜಾರಿಗೊಳಿಸಿದರು, ಅದಾನಿಯಂತಹ ವ್ಯಕ್ತಿಗಳಿಗಾಗಿ ಕೆಲಸ ಮಾಡಿದರು. ನಾವು ಭಾರತಿ ಭರವಸೆ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಜೂನ್ 4ರಂದು ಇಂಡಿಯಾ ಮೈತ್ರಿಕೂಟದ ಸರಕಾರವು ರಚನೆಯಾಗಲಿದೆ. ಆಗಸ್ಟ್ 15ರ ವೇಳೆಗೆ ಜನರಿಗೆ 30 ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸ ಪ್ರಾರಂಭವಾಗಲಿದೆ. ಜೈ ಹಿಂದ್” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಇಂದು ಬೆಳಗ್ಗೆ ತೆಲಂಗಾಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲೂ ಪಾಲ್ಗೊಂಡರು. ಮೇಡಕ್ ನಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಿದರು. “ಒಂದು ಬದಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ನಿಮ್ಮ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರನ್ನೊಳಗೊಂಡ ಇಂಡಿಯಾ ಮೈತ್ರಿಕೂಟವಿದ್ದರೆ, ಮತ್ತೊಂದು ಬದಿಯಲ್ಲಿ ಸಂವಿಧಾನವನ್ನು ಬದಲಿಸಲು ಅಥವಾ ನಾಶಗೊಳಿಸಲು ಬಯಸುತ್ತಿರುವವರಿದ್ದಾರೆ. ನಾವು ಸಂವಿಧಾನವನ್ನು ತಿರುಚಲು ಅವಕಾಶ ನೀಡುವುದಿಲ್ಲ ಹಾಗೂ ಅದನ್ನು ರಕ್ಷಿಸಲು ನಾವು ಎಲ್ಲವನ್ನೂ ತ್ಯಾಗ ಮಾಡಲಿದ್ದೇವೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ 20-25 ಜನರಿಗೆ ಲಾಭವಾಗುವಂತಹ ನೀತಿಗಳನ್ನು ರೂಪಿಸಿದರು. ಅವರ ನೀತಿಗಳು ಎಲ್ಲ ಸಂಸ್ಥೆಗಳು ಹಾಗೂ ಎಲ್ಲ ಕಂಪನಿಗಳನ್ನು ಖಾಸಗೀಕರಣಗೊಳಿಸುವುದಾಗಿದ್ದು, ಈ ನೀತಿಗಳು ಮೀಸಲಾತಿಯನ್ನು ತೆಗೆದು ಹಾಕುವ ಗುರಿ ಹೊಂದಿವೆ. ಮೀಸಲಾತಿಯನ್ನು ತೆಗೆದು ಹಾಕಲು ಮೋದಿ ಹಾಗೂ ಶಾ ಎಲ್ಲವನ್ನೂ ಮಾಡುತ್ತಿದ್ದಾರೆ. ಹೀಗಿದ್ದೂ, ನಾವು ಮೀಸಲಾತಿ ಪ್ರಮಾಣವನ್ನು ಶೇ. 50ರ ಮಿತಿಯಾಚೆಗೆ ಹೆಚ್ಚಿಸಲಿದ್ದೇವೆ” ಎಂದು ಭರವಸೆ ನೀಡಿದರು.
“ನಾವು ರಾಜಕೀಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದ್ದೇವೆ. ತೆಲಂಗಾಣ ನಡೆಸುತ್ತಿರುವ ಜಾತಿ ಗಣತಿಯಂತೆಯೇ ನಾವು ದೇಶಾದ್ಯಂತ ಜಾತಿ ಗಣತಿ ನಡೆಸಲಿದ್ದೇವೆ ಹಾಗೂ ಅದರ ಫಲಿತಾಂಶವು ವಿಸ್ಮಯಕರವಾಗಿರಲಿದೆ. ಈ ದೇಶದಲ್ಲಿ ಕೇವಲ ಶೇ. 2-3ರಷ್ಟು ಜನರು ಮಾತ್ರ ಆಡಳಿತ ನಡೆಸುತ್ತಿದ್ದು, ಎಲ್ಲ ಸಂಪತ್ತಿನೊಂದಿಗೆ ದೇಶ, ರಾಜಕಾರಣ ಹಾಗೂ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಜಾತಿ ಗಣತಿಯು ಈ ಸತ್ಯವನ್ನು ಹೊರ ತರಲಿದೆ. ಈ ಜಾತಿ ಗಣತಿಯು ಎಷ್ಟು ಮಂದಿ ನಿಜವಾಗಿಯೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬುದನ್ನು ತಿಳಿಸಲಿದೆ. ಸಾಮಾಜಿಕ ಹಿಂದುಳಿದಿರುವ ಜನರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನೆಲ್ಲ ನಾವು ಒಟ್ಟುಗೂಡಿಸಿದರೆ, ಆಗ ಈ ಸಮುದಾಯಗಳೇ ದೇಶದ ಬಹುಸಂಖ್ಯಾತರಾಗುತ್ತಾರೆ. ಹೀಗಿದ್ದೂ, ಅವರಿಗೆ ಯಾವುದರ ಮೇಲೂ ಹಕ್ಕಿಲ್ಲ” ಎಂದು ಅವರು ಹೇಳಿದರು.
“ಮೋದಿಯು ಎಲ್ಲ ಬಂದರುಗಳು, ವಿಮಾನ ನಿಲ್ದಾಣಗಳು ಹಾಗೂ ಇನ್ನಿತರ ಯೋಜನೆಗಳನ್ನು ಅದಾನಿಗೆ ನೀಡಿದ್ದಾರೆ. ನಮ್ಮ ಉದ್ದೇಶವು ಕೆಲವೇ ಜನಗಳನ್ನು ಕೋಟ್ಯಧಿಪತಿಗಳನ್ನಾಗಿಸುವದಲ್ಲ; ಕೋಟ್ಯಂತರ ಬಡವರನ್ನು ಲಕ್ಷಾಧಿಪತಿಗಳನ್ನಾಗಿಸುವುದು. ನಾವು ಬಡತನದ ಸಮೀಕ್ಷೆ ನಡೆಸಲಿದ್ದೇವೆ ಹಾಗೂ ಅಂತಹ ಕುಟುಂಬಗಳನ್ನು ಗುರುತಿಸಲಿದ್ದೇವೆ. ಅಂತಹ ಕುಟುಂಬಗಳಲ್ಲಿನ ಪ್ರತಿ ಮಹಿಳೆಯು ಮಾಸಿಕ ರೂ. 8,500ರಂತೆ ವಾರ್ಷಿಕ ರೂ. 1 ಲಕ್ಷ ಪಡೆಯಲಿದ್ದಾರೆ. ನಾವು ಮೀಸಲಾತಿಯನ್ನು ರಕ್ಷಿಸಬೇಕಿದೆ, ನಾವು ಸಾರ್ವಜನಿಕ ಉದ್ಯಮಗಳನ್ನು ರಕ್ಷಿಸಬೇಕಿದೆ, ನಾವು ರೈತರು ಹಾಗೂ ಬಡ ಜನರನ್ನು ರಕ್ಷಿಸಬೇಕಿದೆ, ನಾವು ಸಂವಿಧಾನವನ್ನು ರಕ್ಷಿಸಬೇಕಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯಬೇಕಿದೆ” ಎಂದೂ ಅವರು ಹೇಳಿದ್ದಾರೆ.