ಹರ್ಯಾಣ ಮಾಜಿ ಡಿಸಿಎಂ ದುಷ್ಯಂತ್ ಚೌಟಾಲಾಗೆ ಆಘಾತ: ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಜೆಜೆಪಿ ತೊರೆದ ನಾಲ್ವರು ಶಾಸಕರು
ದುಷ್ಯಂತ್ ಚೌಟಾಲಾ (PTI)
ಚಂಡೀಗಢ: ಹರ್ಯಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೆ ಒಂದೇ ದಿನದಲ್ಲಿ ನಾಲ್ವರು ಶಾಸಕರು ಜೆಜೆಪಿಯನ್ನು ತೊರೆಯುವ ಮೂಲಕ, ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲಾಗೆ ಭಾರಿ ಆಘಾತವನ್ನುಂಟು ಮಾಡಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷವು ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನಂತರ, ಕಳೆದ ಮಾರ್ಚ್ ತಿಂಗಳಲ್ಲಿ ಅವರು ಉಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿದಿದ್ದರು.
ಅಕ್ಟೋಬರ್ 1ರಂದು ನಡೆಯಲಿರುವ ಚುನಾವಣೆಗೆ ಶುಕ್ರವಾರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೆ, ದುಷ್ಯಂತ್ ಚೌಟಾಲರ ಆಪ್ತ ಹಿಂಬಾಲಕ ಹಾಗೂ ಮಾಜಿ ಸಚಿವ ಅನೂಪ್ ಧನಕ್, ತಾವು ಪ್ರತಿನಿಧಿಸುತ್ತಿರುವ ಉಕ್ಲಾನಾ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷ ತೊರೆದಿದ್ದರು.
ಇದರ ಬೆನ್ನಿಗೇ ಶನಿವಾರ, ತೊಹಾನ ಶಾಸಕ ದೇವೇಂದರ್ ಸಿಂಗ್ ಬಬ್ಲಿ, ಗುಹ್ಲ ಶಾಸಕ ಈಶ್ವರ್ ಸಿಂಗ್ ಹಾಗೂ ಶಹಾಬಾದ್ ಶಾಸಕ ರಾಮ್ ಕರಣ್ ಕಾಲಾ ಕೂಡಾ ತಮ್ಮ ರಾಜೀನಾಮೆಗಳನ್ನು ಪಕ್ಷಕ್ಕೆ ರವಾನಿಸಿದ್ದು, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ಈ ಪೈಕಿ ರಾಮ್ ಕರಣ್ ಕಾಲಾ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ನಾಲ್ವರು ಶಾಸಕರಲ್ಲದೆ, ಇನ್ನಿತರ ಮೂವರು ಶಾಸಕರಾದ ಬರ್ವಾರ ಕ್ಷೇತ್ರದ ಜೋಗಿ ರಾಮ್ ಸಿಹಾಗ್, ನರ್ವಾನಾದ ರಾಮ್ ನಿವಾಸ್ ಸುರ್ಜಖೇರಾ ಹಾಗೂ ನರ್ನೌಂದ್ ಕ್ಷೇತ್ರದ ಶಾಸಕ ರಾಮ್ ಕುಮಾರ್ ಗೌತಮ್ ಕೂಡಾ ಜೆಜೆಪಿಯಿಂದ ದೂರ ಸರಿದಿದ್ದಾರೆ.
ಈ ನಾಲ್ವರು ಶಾಸಕರು ಜೆಜೆಪಿಗೆ ರಾಜೀನಾಮೆ ನೀಡುವುದರೊಂದಿಗೆ ದುಷ್ಯಂತ್ ಚೌಟಾಲಾರೊಂದಿಗೆ ಈಗ ಕೇವಲ ಮೂವರು ಶಾಸಕರು ಮಾತ್ರ ಉಳಿದಿದ್ದಾರೆ. ದುಷ್ಯಂತ್ ಚೌಟಾಲ ಅಲ್ಲದೆ, ಅವರ ತಾಯಿ ನೈನಾ ಚೌತಾಲಾ ಹಾಗೂ ಅಮರಜೀತ್ ಸಿಂಗ್ ದಂಡ ಮಾತ್ರ ಈಗ ಜೆಜೆಪಿಯಲ್ಲಿ ಉಳಿದಿದ್ದಾರೆ. ಇದು ದುಷ್ಯಂತ್ ಚೌತಾಲಾರ ಪಾಲಿಗೆ ಭಾರಿ ಹಿನ್ನಡೆಯೆಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.