ಗಾಝಾದ ಫೆಲೆಸ್ತೀನೀಯರ ದಯನೀಯ ಪರಿಸ್ಥಿತಿಯ ಬಗ್ಗೆ ಶೋಕ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ | Photo: NDTV
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಸೋಮವಾರ ತನ್ನ ಕ್ರಿಸ್ಮಸ್ ಸಂದೇಶದಲ್ಲಿ ಗಾಝಾದಲ್ಲಿರುವ ಫೆಲೆಸ್ತೀನೀಯರ ದಯನೀಯ ಪರಿಸ್ಥಿತಿಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕು ಮತ್ತು ಒತ್ತೆಯಾಳುಗಳ ಬಿಡುಗಡೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘‘ಅಕ್ಟೋಬರ್ 7ರಂದು ನಡೆದ ಅನಾಗರಿಕ ದಾಳಿಯ ಸಂತ್ರಸ್ತರಿಗಾಗಿ ನನ್ನ ಹೃದಯ ದುಃಖಿಸುತ್ತದೆ ಮತ್ತು ಈಗಲೂ ಒತ್ತೆಯಲ್ಲಿ ಇರುವವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂಬ ನನ್ನ ತುರ್ತು ಮನವಿಯನ್ನು ನಾನು ಪುನರುಚ್ಚರಿಸುತ್ತೇನೆ’’ ಎಂದು 86 ವರ್ಷದ ಪೋಪ್ ತನ್ನ ಸಾಂಪ್ರದಾಯಿಕ ‘ಉರ್ಬಿ ಎಟ್ ಒರ್ಬಿ’ ಸಂದೇಶದಲ್ಲಿ ಹೇಳಿದ್ದಾರೆ.
‘‘ಸೇನಾ ಕಾರ್ಯಾಚರಣೆಗಳು ತಕ್ಷಣ ನಿಲ್ಲಬೇಕೆಂದು ನಾನು ಮನವಿ ಮಾಡುತ್ತೇನೆ. ಈ ಕಾರ್ಯಾಚರಣೆಗಳು ಭಾರೀ ಪ್ರಮಾಣದಲ್ಲಿ ಅಮಾಯಕ ನಾಗರಿಕರ ಬಲಿಗಳನ್ನು ಪಡೆದುಕೊಂಡಿವೆ. ಗಾಝಾದಲ್ಲಿ ನೆಲೆಸಿರುವ ಅತ್ಯಂತ ಅಮಾನವೀಯ ಪರಿಸ್ಥಿತಿಗೆ ಪರಿಹಾರವೊಂದನ್ನು ಕಂಡುಕೊಳ್ಳಬೇಕೆಂದು ನಾನು ಕರೆ ನೀಡುತ್ತೇನೆ. ಅದನ್ನು ಮಾನವೀಯ ನೆರವು ವಿತರಣೆಗೆ ಅವಕಾಶ ಮಾಡಿಕೊಡುವ ಮೂಲಕ ಸಾಧಿಸಬೇಕು’’ ಎಂದು ವ್ಯಾಟಿಕನ್ನ ಸೇಂಟ್ ಪೀಟರ್ಸ್ ಬ್ಯಾಸಿಲಿಕದಲ್ಲಿ ನೆರೆದ ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಆರಂಭಗೊಂಡ ಸುಮಾರು ಎರಡೂವರೆ ತಿಂಗಳುಗಳ ಬಳಿಕ, ಗಾಝಾ ಪಟ್ಟಿಯಲ್ಲಿ ಮಾನವೀಯ ಪರಿಸ್ಥಿತಿಯು ಹದಗೆಟ್ಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಗಾಝಾ ಪಟ್ಟಿಯ 85 ಶೇಕಡ ಜನರು ನಿರ್ವಸಿತರಾಗಿದ್ದಾರೆ ಎಂದು ಅದು ಹೇಳಿದೆ.
‘‘ಸಂಬಂಧಪಟ್ಟ ಪಕ್ಷಗಳ ನಡುವಿನ ಪ್ರಾಮಾಣಿಕ ಮತ್ತು ನಿರಂತರ ಮಾತುಕತೆಗಳ ಮೂಲಕ ಫೆಲೆಸ್ತೀನ್ ಸಂಘರ್ಷಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳಬೇಕು’’ ಎಂದು ಪೋಪ್ ಕರೆ ನೀಡಿದ್ದಾರೆ. ಇದಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಅಂತರ್ರಾಷ್ಟ್ರೀಯ ಸಮುದಾಯದ ಬೆಂಬಲ ಬೇಕು ಎಂದು ಅವರು ಹೇಳಿದ್ದಾರೆ.
ಉಕ್ರೇನ್, ಸಿರಿಯ, ಲೆಬನಾನ್, ಯೆಮನ್ನಲ್ಲೂ ಶಾಂತಿ ನೆಲೆಸಲಿ:
ಕೆಥೋಲಿಕ್ ಕ್ರೈಸ್ತರ ಧರ್ಮ ಗುರು ಪೋಪ್ ಫ್ರಾನ್ಸಿಸ್ ತನ್ನ ಕ್ರಿಸ್ಮಸ್ ಸಂದೇಶದಲ್ಲಿ ಸಿರಿಯ, ಲೆಬನಾನ್, ಯೆಮನ್ ಸಂಘರ್ಷಗಳನ್ನೂ ಉಲ್ಲೇಖಿಸಿದರು. ‘‘ಈ ದೇಶಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆ ಶೀಘ್ರವೇ ನೆಲೆಸಲಿ ಎಂದು ನಾನು ಪ್ರಾರ್ಥಿಸಿದೆ’’ ಎಂದರು.
‘‘ಉಕ್ರೇನ್ನಲ್ಲಿ ಶಾಂತಿಗಾಗಿ ನಾನು ಪ್ರಾರ್ಥಿಸಿದೆ’’ ಎಂದರು. ಉಕ್ರೇನ್ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಿಸುತ್ತಿದೆ. ರಶ್ಯದಲ್ಲಿ ಚಾಲ್ತಿಯಲ್ಲಿರುವ ಆರ್ತೊಡಾಕ್ಸ್ ಪಂಥದ ಜನವರಿ 7ರ ಕ್ರಿಸ್ಮಸ್ ಆಚರಣೆಯಿಂದ ಅದು ಹಿಂದೆ ಸರಿದಿದೆ.