10 ಕೇಂದ್ರೀಯ ವಿವಿಗಳಿಗೆ ಕುಲಪತಿಗಳೇ ಇಲ್ಲ: ಉನ್ನತ ಶಿಕ್ಷಣದತ್ತ ಕೇಂದ್ರದ ಬದ್ಧತೆ ಬಗ್ಗೆ ಪ್ರಶ್ನೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಶಾಂತಿನಿಕೇತನದ ವಿಶ್ವಭಾರತಿ ಸೇರಿದಂತೆ ಹತ್ತು ಕೇಂದ್ರೀಯ ವಿವಿಗಳು ಪ್ರಸ್ತುತ ಉಪಕುಲಪತಿಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದ ಬದ್ಧತೆಯನ್ನು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸುವಂತೆ ಮಾಡಿದೆ ಎಂದು telegraphindia.com ವರದಿ ಮಾಡಿದೆ.
ವಿಶ್ವಭಾರತಿ, ಕೇರಳ ಕೇಂದ್ರೀಯ ವಿವಿ, ಗುಜರಾತ್ ಕೇಂದ್ರೀಯ ವಿವಿ, ಪಾಂಡಿಚೇರಿ ವಿವಿ, ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿವಿ, ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ವಿವಿ, ರಾಜೀವ್ ಗಾಂಧಿ ವಿವಿ, ಮಹಾತ್ಮಾಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿವಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ(ಇಗ್ನೌ) ಮತ್ತು ಹೇಮವತಿ ನಂದನ ಬಹುಗುಣ ಗಡ್ವಾಲ್ ವಿವಿ ಇವು ಪ್ರಸ್ತುತ ನಿಯಮಿತ ಕುಲಪತಿಗಳನ್ನು ಹೊಂದಿಲ್ಲ.
ಈ ನಡುವೆ ಬನಾರಸ್ ಹಿಂದು ವಿವಿ (ಬಿಎಚ್ಯು)ಯ ಕುಲಪತಿ ಸುಧೀರ ಕೆ.ಜೈನ್ ಅವರ ಅಧಿಕಾರಾವಧಿ ಜ.8ರಂದು ಅಂತ್ಯಗೊಳ್ಳಲಿದೆ. ವಿವಿಯ ವಿಸಿಟರ್ ಆಗಿರುವ ರಾಷ್ಟ್ರಪತಿಗಳು ಬಿಎಚ್ಯು ಕಾರ್ಯಕಾರಿ ಮಂಡಳಿಗೆ ಸದಸ್ಯರ ನಾಮ ನಿರ್ದೇಶನ ಮಾಡಿದ್ದರೂ ಅವರನ್ನು ನೇಮಕಗೊಳಿಸಲಾಗಿಲ್ಲ,ಹೀಗಾಗಿ ಅದು ಜೂನ್ 2021ರಿಂದಲೂ ನಿಷ್ಕ್ರಿಯವಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ನಿರ್ದೇಶಕರ ಹುದ್ದೆಯೂ ಆಗಸ್ಟ್ 2021ರಿಂದ ಖಾಲಿಯಾಗಿಯೇ ಉಳಿದಿದೆ.
ನಿಯಮಿತ ಕುಲಪತಿಯ ಹುದ್ದೆ ಖಾಲಿಯಿದ್ದರೆ ಅದು ವಿವಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ನಿಯಮಿತ ಕುಲಪತಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ನಿರ್ವಹಿಸುತ್ತಾರೆ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯನ್ನು ಹೊಂದಿರುತ್ತಾರೆ.
ಶಿಕ್ಷಣ ಸಚಿವಾಲಯವು ತನ್ನ ಅಧೀನದಲ್ಲಿರುವ ಸಂಸ್ಥೆಗಳಿಗೆ ಕುಲಪತಿಗಳು ಮತ್ತು ನಿರ್ದೇಶಕರನ್ನು ನೇಮಕ ಮಾಡುತ್ತದೆ. ಇದಕ್ಕಾಗಿ ಅದು ಜಾಹೀರಾತುಗಳನು ಹೊರಡಿಸುತ್ತದೆ,ವಿಸಿಟರ್ ಅನುಮೋದನೆಯೊಂದಿಗೆ ಶೋಧ ಸಮಿತಿಗಳನ್ನು ರಚಿಸುತ್ತದೆ,ಅಭ್ಯರ್ಥಿಗಳ ಸಂದರ್ಶನಕ್ಕೆ ನೆರವಾಗುತ್ತದೆ ಮತ್ತು ನೇಮಕಾತಿ ಪತ್ರಗಳನ್ನು ಹೊರಡಿಸುತ್ತದೆ. ಆದರೆ ಸದ್ಯಕ್ಕೆ ಅದೂ ನಿಷ್ಕ್ರಿಯವಾಗಿರುವಂತಿದೆ.
ಸರಕಾರವು ಉನ್ನತ ಶಿಕ್ಷಣದ ಬಗ್ಗೆ ಪ್ರಾಮಾಣಿಕವಾಗಿಲ್ಲ,ಅದು ಚುನಾವಣಾ ಲಾಭಗಳಿರುವ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಶಿಕ್ಷಣವು ಅದು ಚುನಾವಣಾ ಲಾಭವನ್ನು ಪಡೆಯಬಹುದಾದ ಕ್ಷೇತ್ರವಲ್ಲ,ಈ ಕ್ಷೇತ್ರವು ಅದರ ಆದ್ಯತೆಯಲ್ಲ ಎಂದು ಕುಲಪತಿಗಳ ನೇಮಕಗಳಲ್ಲಿ ಅವ್ಯವಹಾರಗಳ ಆರೋಪಗಳ ಕುರಿತು ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುತ್ತಿರುವ ಆರ್ಟಿಐ ಕಾರ್ಯಕರ್ತ ನವೀನ ನೌಟಿಯಾಲ್ ಹೇಳಿದರು.
ಪ್ರಸಕ್ತ ಆಡಳಿತ ವ್ಯವಸ್ಥೆಯು ಅಭ್ಯರ್ಥಿಗಳ ಪರಿಶೀಲನೆಯ ಇನ್ನೊಂದು ಅನಧಿಕೃತ ಹಂತವನ್ನು ಪರಿಚಯಿಸಿದೆ. ಶಿಕ್ಷಣ ಸಚಿವಾಲಯವು ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸುತ್ತದೆ ಮತ್ತು ಅವು ಅಲ್ಲಿಯೇ ಬಾಕಿಯಾಗುತ್ತವೆ ಎಂದು ಇಬ್ಬರು ನಿವೃತ್ತ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಲೋಕಸಭೆಯಲ್ಲಿ ಕಳೆದ ಸೋಮವಾರ ಎಸ್ಪಿ ಸಂಸದ ವೀರೇಂದ್ರ ಸಿಂಗ್ ಅವರು ಕಳೆದ ಮೂರು ವರ್ಷಗಳಲ್ಲಿ ಬಿಎಚ್ಯು ಕಾರ್ಯಕಾರಿ ಮಂಡಳಿಯನ್ನು ರಚಿಸಲಾಗಿಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಬಯಸಿದ್ದರು. ಲಿಖಿತ ಉತ್ತರದಲ್ಲಿ ಸಹಾಯಕ ಶಿಕ್ಷಣ ಸಚಿವ ಸುಕಾಂತ ಮಜುಮ್ದಾರ್ ಅವರು,ಮಂಡಳಿಗೆ ಸದಸ್ಯರ ನೇಮಕಾತಿಯು ‘ಮುಂದುವರಿದ ಹಂತದಲ್ಲಿದೆ’ ಎಂದು ತಿಳಿಸಿದ್ದರು.