ರಾಜಸ್ಥಾನದಲ್ಲಿ ಬಿಜೆಪಿ ಇನ್, ಕಾಂಗ್ರೆಸ್ ಔಟ್ ಎಂದ 2 ಚುನಾವಣೋತ್ತರ ಸಮೀಕ್ಷೆಗಳು
ಸಮೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಜೈಪುರ: ಕಳೆದ ಮೂರು ದಶಕಗಳಿಂದ ಪ್ರತಿ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಹೊರಗಿಟ್ಟಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಸಜ್ಜಾಗಿದೆ ಎಂದು ಗುರುವಾರ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದೆ. ರಾಜಸ್ಥಾನದ ವಿಧಾನ ಸಭೆಗೆ ನವೆಂಬರ್ 25 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಸಮೀಕ್ಷೆಗಳನ್ನು ನೋಡಿದರೆ ಕಾಂಗ್ರೆಸ್ನ ಅಶೋಕ್ ಗೆಹ್ಲೋಟ್ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿ ಕೈಗೂಡುವ ಹಾಗೆ ಕಾಣುತ್ತಿಲ್ಲ.
ಟೈಮ್ಸ್ ನೌ-ಇಟಿಜಿ ಸಮೀಕ್ಷೆ ಬಿಜೆಪಿಗೆ 108-128 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ ಎಂದಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಗರಿಷ್ಠ 72 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.
ರಾಜಸ್ಥಾನ ವಿಧಾನ ಸಭೆಯಲ್ಲಿ 200 ಸ್ಥಾನಗಳಿವೆ. ಆದರೆ ಕಾರನ್ಪುರದ ಶಾಸಕ ಕಾಂಗ್ರೆಸ್ನ ಗುರ್ಮೀತ್ ಕೂನರ್ ಮತದಾನಕ್ಕೂ ಮುನ್ನ ನಿಧನರಾದ್ದರಿಂದ 199 ಸ್ಥಾನಗಳಿಗೆ ಮಾತ್ರ ಮತದಾನ ನಡೆದಿತ್ತು. ಆದಾಗ್ಯೂ ಬಹುಮತದ ಪಡೆಯಲು 101 ಸ್ಥಾನಗಳಷ್ಟೇ ಸಾಕು.
ಇತರ ಸಮೀಕ್ಷೆಗಳಲ್ಲಿ, ಜನ್ ಕಿ ಬಾತ್, ಪಿ-ಮಾರ್ಕ್ ಮತ್ತು TV9 ಭಾರತ್ ವರ್ಷ್-ಪೋಲ್ಸ್ಟ್ರಾಟ್ ಇವೆಲ್ಲವೂ ಬಿಜೆಪಿ ಕನಿಷ್ಠ 100 ಸ್ಥಾನ ಗೆಲ್ಲಲಿದೆ ಎಂದಿದೆ.
ಇಂಡಿಯಾ ಟುಡೇ-ಮೈ ಆಕ್ಸಿಸ್ ಮತ್ತು ದೈನಿಕ್ ಭಾಸ್ಕರ್ ಕಾಂಗ್ರೆಸ್ಗೆ ಸರಳ ಬಹುಮತದ ಭರವಸೆಯನ್ನು ಸಮೀಕ್ಷೆಯಲ್ಲಿ ನೀಡಿವೆ. ಮೊದಲನೆಯದು ಬಿಜೆಪಿಗೆ 80 ರಿಂದ 100 ಸ್ಥಾನ, ಎರಡನೆಯದು 98 ರಿಂದ 105 ರ ನಡುವಿನ ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.