ಮೋದಿ ಸ್ವಾಗತಕ್ಕೆ ಮಧ್ಯಪ್ರದೇಶ ಸಿಎಂ ಭ್ರಷ್ಟಾಚಾರ ಆರೋಪದ ಪೋಸ್ಟರ್ ಗಳು ಪ್ರತ್ಯಕ್ಷ
PC: @INCMP | Twitter
ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶಕ್ಕೆ ಭೇಟಿ ನೀಡುವ ಮುನ್ನಾ ದಿನ ಭೋಪಾಲ್, ಇಂಧೋರ್ ಹಾಗೂ ಇತರ ಕೆಲ ನಗರಗಳಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಬಿಜೆಪಿ ಆಡಳಿತದ ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಪೋಸ್ಟರ್ ಗಳನ್ನು ಹಚ್ಚಿದೆ ಎನ್ನುವುದು ಬಿಜೆಪಿ ಆರೋಪ. ಆದರೆ ಕಾಂಗ್ರೆಸ್ ಇದನ್ನು ನಿರಾಕರಿಸಿದ್ದು, ಭ್ರಷ್ಟಾಚಾರದಿಂದ ಬೇಸತ್ತ ಜನತೆ ಹಚ್ಚಿದ್ದಾರೆ ಎಂದು ಸಮರ್ಥಿಸಿದೆ. ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಇದು ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೋಪಾಲ್ ಗೆ ಭೇಟಿ ನೀಡಲಿದ್ದಾರೆ.
ಭೋಪಾಲ್, ಇಂಧೋರ್, ಗ್ವಾಲಿಯರ್, ಸೆಹೋರ್, ರೇವಾ, ಮಂದಸಾರ್, ಉಜ್ಜಯಿನಿ, ಬುಧ್ನಿ ಮತ್ತು ಇತರ ಕೆಲ ನಗರಗಳಲ್ಲಿ ಈ ಪೋಸ್ಟರ್ಗಳು ರಾರಾಜಿಸುತ್ತಿರುವ ವಿಡಿಯೊ ತುಣುಕನ್ನು ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ. ‘ಬುಧ್ನಿ’ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾಗಿದೆ.
"ಪೋಸ್ಟರ್ ನಲ್ಲಿ ಒಂದು ಕ್ಯೂಆರ್ ಕೋಡ್ ಹಾಗೂ ಮುಖ್ಯಮಂತ್ರಿಯ ಭಾವಚಿತ್ರವಿದ್ದು, "50% ತನ್ನಿ ಹಾಗೂ ಕೆಲಸ ಮಾಡಿಸಿಕೊಳ್ಳಿ" (50% ಲಾವೊ, ಕಾಮ್ ಕರಾವೊ) ಎಂಬ ಸಂದೇಶವಿದೆ. ಜತೆಗೆ ಆನ್ಲೈನ್ ಪಾವತಿ ಆ್ಯಪ್ ‘ಫೋನ್ ಪೇ’ ಯ ಸಂಕೇತವನ್ನು ಬಳಸಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರ ಸ್ವಕ್ಷೇತ್ರವಾದ ಇಂಧೋರ್ ನ ನಂದಾ ನಗರದಲ್ಲಿ ಈ ಪೋಸ್ಟರ್ ಕಂಡುಬಂದಿದೆ ಎಂದು ಟ್ವೀಟ್ ನಲ್ಲಿ ವಿವರಿಸಲಾಗಿದೆ.
"ಕರ್ನಾಟಕದಲ್ಲಿ 40% ಕಮಿಷನ್ ಇತ್ತು. ಭ್ರಷ್ಟಾಚಾರದಲ್ಲಿ ಶಿವರಾಜ್ ಕರ್ನಾಟಕವನ್ನು ಸೋಲಿಸಿದ್ದಾರೆ" ಎಂದು ಕಾಂಗ್ರೆಸ್ ಅಣಕಿಸಿದೆ. ಈ ಅಭಿಯಾನವನ್ನು ಬಿಜೆಪಿಯೇ ಆರಂಭಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಹೇಳಿದ್ದಾರೆ.
ಜೂನ್ 23ರಂದು ಚೌಹಾಣ್ ಹಾಗೂ ಕಮಲನಾಥ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ಪೋಸ್ಟರ್ ಗಳು ರಾಜಧಾನಿಯಲ್ಲಿ ಕಂಡುಬಂದಿದ್ದವು. "ಕರಪ್ಟ್ ನಾಥ್" ಎಂಬ ಶೀರ್ಷಿಕೆಯ ಪೋಸ್ಟರ್ ಗಳು ಶಹಾಪುರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಅವರನ್ನು ಹಲವು ಹರಣಗಳಲ್ಲಿ ಬೇಕಾದ ವ್ಯಕ್ತಿ ಎಂದು ಬಿಂಬಿಸಲು "ವಾಂಟೆಡ್" ಎಂಬ ಸಂದೇಶ ಇತ್ತು. "ಸ್ಕ್ಯಾಮ್ಸ್ಸೇ ಬಚ್ನೇ ಕೇ ಲಿಯಾ ಸ್ಕ್ಯಾನ್ ಕರೊ" ಎಂಬ ಘೋಷಣೆ ಇತ್ತು.