ಬಿಜೆಪಿಯಿಂದ ‘ಪವರ್ ಜಿಹಾದ್’ : ಉದ್ದವ್ ಠಾಕ್ರೆ ಆರೋಪ
ಉದ್ದವ್ ಠಾಕ್ರೆ | PC : PTI
ಮುಂಬೈ: ಬಿಜೆಪಿಯು ಅಧಿಕಾರದಲ್ಲಿರುವುದಕ್ಕಾಗಿ ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ ‘ಪವರ್ ಜಿಹಾದ್’ನಲ್ಲಿ ತೊಡಗಿದೆಯೆಂದು ಶಿವಸೇನಾ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ ಶನಿವಾರ ಆಪಾದಿಸಿದ್ದಾರೆ.
ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ತನ್ನನ್ನು ಔರಂಗಜೇಬ್ ಅಭಿಮಾನಿ ಸಂಘದ ಸದಸ್ಯನೆಂದು ವ್ಯಂಗ್ಯವಾಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ಶಾ ಅವರನ್ನು ತರಾಟೆಗೆ ತೆಗೆದುಕೊಂಡರು. ಅಮಿತ್ಶಾ ಅವರು ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಅಫ್ಘಾನ್ ದೊರೆ ಅಹ್ಮದ್ ಶಾ ಅಬ್ದಾಲಿಯ ‘ರಾಜಕೀಯ ಸಂತತಿ’ಯೆಂದು ಕಟಕಿಯಾಡಿದ್ದಾರೆ. ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರಕಾರದ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಕಾರ್ಯಕ್ರಮವನ್ನು ಟೀಕಿಸಿದ ಅವರು ಈ ಯೋಜನೆಯು ಬಿಟ್ಟಿ ಸವಲತ್ತುಗಳನ್ನು ನೀಡುವ ಮೂಲಕ ಮತದಾರರಿಗೆ ಅಮಿಷವೊಡ್ಡುತ್ತಿದೆ ಎಂದರು.
‘‘ ಒಂದು ವೇಳೆ ಮುಸ್ಲಿಮರು ನಮ್ಮ ಜೊತೆಗಿದ್ದರೆ, ನಮ್ಮ ಹಿಂದುತ್ವವನ್ನು ನಾವು ಅವರಿಗೆ ವಿವರಿಸಿದರೆ, ಬಿಜೆಪಿಯವರು ನಮ್ಮನ್ನು ‘ಔರಂಗಜೇಬ್ ಫ್ಯಾನ್ ಕ್ಲಬ್’ ಎಂದು ಟೀಕಿಸುತ್ತಾರೆ. ಆದರೆ ಬಿಜೆಪಿಯವರು ಮಾಡುವುದು ಅಧಿಕಾರದ (ಪವರ್) ಜಿಹಾದ್ ಆಗಿದೆ’’ ಎಂದು ಉದ್ಧವ್ ಠಾಕ್ರೆ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ತೆ ವರದಿ ಮಾಡಿದೆ.
ಜುಲೈ 21ರಂದು ಅಮಿತ್ ಶಾ ಅವರು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ಮಾತನಾಡಿದ ಸಂದರ್ಭ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವನ್ನು ‘ಔರಂಗಜೇಬ್ ಫ್ಯಾನ್ ಕ್ಲಬ್’ ಎಂದು ಟೀಕಿಸಿದ್ದರು ಹಾಗೂ ಉದ್ಧವ್ ಠಾಕ್ರೆ ಅದರ ನಾಯಕನೆಂದು ಲೇವಡಿ ಮಾಡಿದ್ದರು.
‘‘ಮಹಾವಿಕಾಸ್ ಅಘಾಡಿಯು ಔರಂಗಜೇಬ್ ಫ್ಯಾನ್ ಕ್ಲಬ್ ಆಗಿದ್ದು, ಅದರಿಂದ ಭಾರತದ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈ ಫ್ಯಾನ್ ಕ್ಲಬ್ ಮಹಾರಾಷ್ಟ್ರ ಹಾಗೂ ಭಾರತವನ್ನು ಸುರಕ್ಷಿತವಾಗಿಡದು. ಬಿಜೆಪಿಯಿಂದ ಮಾತ್ರವೇ ಎಲ್ಲರಿಗೂ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಪಡಿಸುತ್ತದೆ” ಎಂದವರು ಹೇಳಿದರು.
ಕಸಬ್ ಜೊತೆ ಶಾಮೀಲಾದವರ ಜೊತೆ ಉದ್ಧವ್ ಊಟ ಮಾಡುತ್ತಾರೆ. ಔರಂಗಾಬಾದ್ ಅನ್ನು ಸಂಭಾಜಿನಗರವಿ ಎಂದು ಕರೆಯುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆಂದು ಅಮಿತ್ ಶಾ ಸಮಾವೇಶದಲ್ಲಿ ಹೇಳಿದ್ದರು.