ಲೋಕಸಭಾ ಚುನಾವಣಾ ಫಲಿತಾಂಶಗಳ ಕುರಿತ ತನ್ನ ಭವಿಷ್ಯ ತಪ್ಪಾಗಿದ್ದನ್ನು ಒಪ್ಪಿಕೊಂಡ ಪ್ರಶಾಂತ್ ಕಿಶೋರ್
ಇನ್ನು ಮುಂದೆ ಸಂಖ್ಯೆಗಳನ್ನು ಅಂದಾಜಿಸುವುದಿಲ್ಲ ಎಂದ ಚುನಾವಣಾ ತಂತ್ರಜ್ಞ
PC :indiatoday.in
ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶಗಳ ಕುರಿತಂತೆ ತಮ್ಮ ಭವಿಷ್ಯ ತಪ್ಪಾಗಿದೆ ಎಂಬುದನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದಾರೆ.
“ಹೌದು, ನಾನು ಮತ್ತು ನನ್ನಂತಹ ಇತರರು ತಪ್ಪಾದ ಭವಿಷ್ಯ ನೀಡಿದೆವು. “ವೀ ಆರ್ ರೆಡಿ ಟು ಈಟ್ ದಿ ಹಂಬಲ್ ಪೈ” ಎಂದು ಪ್ರಶಾಂತ್ ಕಿಶೋರ್ ಶುಕ್ರವಾರ India Today ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಇನ್ನು ಮುಂದೆ ಚುನಾವಣೆಗಳಲ್ಲಿ ಯಾರು ಎಷ್ಟು ಸ್ಥಾನ ಗಳಿಸಬಹುದೆಂಬ ಕುರಿತು ಯಾವುದೇ ಮಾತುಗಳನ್ನಾಡುವುದಿಲ್ಲ,” ಎಂದೂ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
“ನಾನು ನನ್ನ ವಿಶ್ಲೇಷಣೆಯನ್ನು ನಿಮ್ಮ ಮುಂದೆ ಇರಿಸಿದ್ದೆ ಮತ್ತು ಅದು ತಪ್ಪಾಗಿದೆ ಎಂದು ಕ್ಯಾಮೆರಾ ಮುಂದೆ ಒಪ್ಪಿಕೊಳ್ಳಬೇಕಿದೆ. ನಾನು ಸೂಚಿಸಿದ ಸಂಖ್ಯೆಯಲ್ಲಿ ಶೇ 20ರಷ್ಟು ತಪ್ಪಾಗಿದೆ. ಬಿಜೆಪಿ 300ರಷ್ಟು ಸ್ಥಾನ ಗಳಿಸಬಹುದೆಂದು ಅಂದಾಜಿಸಿದ್ದೆವು ಆದರೆ ಅವರಿಗೆ 240 ಸಿಕ್ಕಿದೆ. ಆದರೆ ಬಿಜೆಪಿ ವಿರುದ್ಧ ಸ್ವಲ್ಪ ಆಕ್ರೋಶವಿದೆ ಎಂದು ಹಿಂದೆ ಹೇಳಿದ್ದೆ ಆದರೆ ಮೋದಿ ವಿರುದ್ಧ ವ್ಯಾಪಕ ಅಸಮಾಧಾನವಿಲ್ಲ.” ಎಂದು ಅವರು ಹೇಳಿದರು.
ಈ ರೀತಿ ಸಂಖ್ಯೆಗಳನ್ನು ಅಂದಾಜಿಸುವುದು ತಪ್ಪಾಗಿದೆ ಮತ್ತು ಭವಿಷ್ಯದ ಚುನಾವಣೆಗಳಲ್ಲಿ ಈ ರೀತಿ ಮಾಡುವುದಿಲ್ಲ. ಒಬ್ಬ ಚುನಾವಣಾ ತಂತ್ರಜ್ಞನಾಗಿ ಸಂಖ್ಯೆಗಳ ವಿಚಾರದಲ್ಲಿ ನಾನು ಪ್ರವೇಶಿಸಬಾರದಾಗಿತ್ತು. ಹಿಂದೆ ಕೂಡ ಮಾಡುತ್ತಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಲ್ಲಿ ಸಂಖ್ಯೆಗಳಲ್ಲಿ ಕೈಯ್ಯಾಡಿಸಿ ತಪ್ಪು ಮಾಡಿದೆ, ಒಮ್ಮೆ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇನ್ನೊಮ್ಮೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಆದರೆ ಸಂಖ್ಯೆ ಬಿಟ್ಟು ನಾನು ಹೇಳಿದ ಬೇರೆ ವಿಚಾರಗಳು ಸರಿಯಾಗಿವೆ,” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಬಿಜೆಪಿ 2019 ಚುನಾವಣೆಯ ಫಲಿತಾಂಶ ಪುನರಾವರ್ತಿಸಲಿದೆ ಹಾಗೂ 300ರಷ್ಟು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರಲ್ಲದೆ ಬಿಜೆಪಿಯ ವಿರೋಧಿಗಳು ಜೂನ್ 4ರಂದು ಸಾಕಷ್ಟು ನೀರನ್ನು ಹತ್ತಿರದಲ್ಲಿರಿಸಬೇಕೆಂದು ಎಂದು ವ್ಯಂಗ್ಯವಾಡಿದ್ದರು.