ಬಿಹಾರ | ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ʼಮದ್ಯ ನಿಷೇಧʼ ರದ್ದುಗೊಳಿಸುತ್ತೇವೆ : ಪ್ರಶಾಂತ್ ಕಿಶೋರ್
PHOTO : PTI
ಪಾಟ್ನಾ : ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ʼಮದ್ಯದ ಮೇಲಿನ ನಿಷೇಧʼವನ್ನು ರದ್ದುಗೊಳಿಸಲಿದ್ದೇವೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಅ.2ರಂದು ಪ್ರಶಾಂತ್ ಕಿಶೋರ್ ʼಜನ್ ಸೂರಾಜ್ʼ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಇದಕ್ಕೂ ಮೊದಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ʼಮದ್ಯದ ಮೇಲಿನ ನಿಷೇಧʼವನ್ನು ರದ್ದುಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮದ್ಯ ನಿಷೇಧವು ನಿಷ್ಪರಿಣಾಮಕಾರಿಯಾಗಿದೆ. ಇದು ಮನೆ-ಮನೆಗೆ ಅಕ್ರಮವಾಗಿ ಮದ್ಯಗಳ ವಿತರಣೆಗೆ ಕಾರಣವಾಗಿದೆ. ಇದರಿಂದ ರಾಜ್ಯಕ್ಕೆ 20,000 ಕೋಟಿ ರೂ. ಸಂಭಾವ್ಯ ಅಬಕಾರಿ ಆದಾಯ ಸಿಗದಂತಾಗಿದೆ. ಅಕ್ರಮ ಮದ್ಯ ವ್ಯಾಪಾರದಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಮದ್ಯ ನಿಷೇಧ ರದ್ಧತಿ ಬಗ್ಗೆ ಮಾತನಾಡಿದರೆ ಮಹಿಳೆಯರ ಮತಗಳನ್ನು ಕಳೆದುಕೊಳ್ಳಬಹುದು ಎಂದು ಇತರ ಪಕ್ಷಗಳು ಭಯಪಡುವಂತೆ ನಿಷೇಧದ ವಿರುದ್ಧ ಮಾತನಾಡಲು ನಮ್ಮ ಪಕ್ಷವು ಹಿಂಜರಿಯುವುದಿಲ್ಲ. ಬಿಹಾರದ ದುಃಸ್ಥಿತಿಗೆ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಕಾರಣ. ಅ.2ರಂದು ಪ್ರಾರಂಭವಾಗಲಿರುವ ನಮ್ಮ ರಾಜಕೀಯ ಪಕ್ಷ ʼಜನ್ ಸೂರಾಜ್ʼ ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.