ಬಿಹಾರದ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಸೋಲನುಭವಿಸಿದ ಪ್ರಶಾಂತ್ ಕಿಶೋರ್ ರ ನೂತನ ಪಕ್ಷ!
ಪ್ರಶಾಂತ್ ಕಿಶೋರ್ |PC : PTI
ಪಾಟ್ನಾ: ನವೆಂಬರ್ 13 ರಂದು ನಡೆದ ಬಿಹಾರ ಉಪಚುನಾವಣೆಯಲ್ಲಿ ನಾಲ್ಕರಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ನೂತನ ಪಕ್ಷ ʼಜನ್ ಸುರಾಜ್ʼ ವಿಫಲಗೊಂಡಿದೆ.
ಮುಂದಿನ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 243 ಸ್ಥಾನಗಳಿಗೆ ಸ್ಪರ್ಧಿಸಲು ಪ್ರಶಾಂತ್ ಕಿಶೋರ್ ಯೋಜಿಸಿದ್ದು, ಅದಕ್ಕೂ ಮುನ್ನ, ತಮ್ಮ ಪಕ್ಷ ʼಜನ್ ಸುರಾಜ್ʼ ಉಪಚುನಾವಣೆಯಲ್ಲಿಯೇ ಪ್ರಮುಖ ಪಕ್ಷಗಳನ್ನು ಮಣ್ಣು ಮುಕ್ಕಿಸುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದರು.
ಆದಾಗ್ಯೂ, ಬಿಜೆಪಿ ನೇತೃತ್ವದ ಎನ್ಡಿಎ ಎಲ್ಲಾ ನಾಲ್ಕು ಉಪ-ಚುನಾವಣೆ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಆರ್ಜೆಡಿ ಮತ್ತು ʼಜನ್ ಸುರಾಜ್ʼ ಪಕ್ಷವನ್ನು ಹಿಂದಿಕ್ಕಿದೆ. ತರಾರಿ, ರಾಮಗಢ, ಬೆಳಗಂಜ್ ಮತ್ತು ಇಮಾಮ್ಗಂಜ್ ಕ್ಷೇತ್ರದಲ್ಲಿ ದಾಖಲೆಯ ಅಂತರದಲ್ಲಿ, ಕಿಶೋರ್ ಅವರ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಶಾಸಕರು ಸ್ಪರ್ಧಿಸಿ ಗೆದ್ದುಕೊಂಡದ್ದರಿಂದ ಬಿಹಾರದ ನಾಲ್ಕು ಸ್ಥಾನಗಳು ತೆರವಾಗಿದ್ದವು. ತರಾರಿ ಶಾಸಕ ಸುದಾಮ ಪ್ರಸಾದ್ ಭೋಜ್ಪುರದಿಂದ ಸಂಸದರಾಗಿದ್ದು, ರಾಮಗಢ ಶಾಸಕ ಸುಧಾಕರ್ ಸಿಂಗ್ ಅವರು ಬಕ್ಸರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಇಮಾಮ್ಗಂಜ್ ಶಾಸಕ ಜಿತನ್ ರಾಮ್ ಮಾಂಝಿ ಅವರು ಗಯಾ (ಮೀಸಲು) ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರ ಸಂಪುಟದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದಾರೆ. ಬೆಳಗಂಜ್ ಶಾಸಕ ಸುರೇಂದ್ರ ಪ್ರಸಾದ್ ಜೆಹಾನಾಬಾದ್ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಬಿಹಾರದಾದ್ಯಂತ ಸಕ್ರಿಯವಾಗಿ ‘ಪಾದಯಾತ್ರೆ’ ನಡೆಸಿದ ಕಿಶೋರ್, ಅಕ್ಟೋಬರ್ 2 ಗಾಂಧಿ ಜಯಂತಿಯಂದು ಜನ್ ಸೂರಜ್ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದರು.
“ನೀವೆಲ್ಲರೂ ‘ಜೈ ಬಿಹಾರ್’ ಎಂದು ಎಷ್ಟು ಜೋರಾಗಿ ಹೇಳಬೇಕು ಎಂದರೆ ಯಾರೂ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ‘ಬಿಹಾರಿ’ ಎಂದು ನಿಂದಿಸದಂತೆ ಆಗಬೇಕು. ನಿಮ್ಮ ಧ್ವನಿ ದಿಲ್ಲಿ ತಲುಪಬೇಕು. ಅದು ಬಿಹಾರದ ವಿದ್ಯಾರ್ಥಿಗಳನ್ನು ಹೊಡೆದ ಬಂಗಾಳವನ್ನು ತಲುಪಬೇಕು. ಬಿಹಾರಿ ಮಕ್ಕಳನ್ನು ಥಳಿಸಿದ ತಮಿಳುನಾಡು, ದಿಲ್ಲಿ ಮತ್ತು ಬಾಂಬೆಯನ್ನು ತಲುಪಬೇಕು" ಎಂದು ಕಿಶೋರ್ ಪಕ್ಷ ರಚನೆ ವೇಳೆ ಹೇಳಿದ್ದರು.