ಮಧ್ಯಪ್ರದೇಶ | ಪತಿ ಮೃತಪಟ್ಟ ಬೆಡ್ ಗರ್ಭಿಣಿಯಿಂದ ಶುಚಿಗೊಳಿಸಿದ ಆಸ್ಪತ್ರೆ ಸಿಬ್ಬಂದಿ!
ವಿಡಿಯೋ ವೈರಲ್
Photo: NDTV
ಭೋಪಾಲ್: ಗುಂಡೇಟಿನಿಂದ ಪತಿ ಮೃತಪಟ್ಟಿದ್ದರಿಂದ ಆಸ್ಪತ್ರೆಯ ಬೆಡ್ ನಲ್ಲಿದ್ದ ರಕ್ತವನ್ನು 5 ತಿಂಗಳ ಗರ್ಭಿಣಿಯ ಕೈಯಲ್ಲಿ ಸ್ವಚ್ಛತೆ ಮಾಡಿಸಿದ್ದಾರೆನ್ನಲಾದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳೆಯು ಹಾಸಿಗೆಯನ್ನು ಸ್ವಚ್ಛಗೊಳಿಸುವ ವೀಡಿಯೊ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಆಡಳಿತವು, ಸಾಕ್ಷ್ಯವನ್ನು ಸಂಗ್ರಹಿಸಲು ರಕ್ತವನ್ನು ಬಟ್ಟೆಯಿಂದ ಒರೆಸಲು ಅವಕಾಶ ನೀಡಬೇಕೆಂದು ಮಹಿಳೆ ಕೇಳಿಕೊಂಡಿದ್ದರು ಎಂದು ಹೇಳಿಕೊಂಡಿದೆ.
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಘಟನೆಯೊಂದರಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ದಿಂಡೋರಿ ಜಿಲ್ಲೆಯ ಲಾಲ್ಪುರ್ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಅವರ ಮೂವರು ಪುತ್ರರ ಮೇಲೆ ಗುಂಡು ಹಾರಿಸಲಾಗಿತ್ತು. ತಂದೆ ಮತ್ತು ಒಬ್ಬ ಮಗ ಸ್ಥಳದಲ್ಲೇ ಮೃತಪಟ್ಟರು. ಇಬ್ಬರು ಮಕ್ಕಳಾದ ಶಿವರಾಜ್ ಮತ್ತು ರಾಮರಾಜ್ ಅವರನ್ನು ಗಡಸರಾಯ್ ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಲಾಯಿತು.
ಶಿವರಾಜ್ ಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಐದು ತಿಂಗಳ ಗರ್ಭಿಣಿ ಪತ್ನಿ ರೋಶ್ನಿ ಅವರನ್ನು ಆಸ್ಪತ್ರೆಯ ಹಾಸಿಗೆಯನ್ನು ಸ್ವಚ್ಛಗೊಳಿಸುವಂತೆ ಮಾಡಲಾಗಿತ್ತು. ರೋಶ್ನಿ ಒಂದು ಕೈಯಲ್ಲಿ ರಕ್ತದ ಬಟ್ಟೆಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಟಿಶ್ಯೂಗಳನ್ನು ಬಳಸಿ ಹಾಸಿಗೆಯನ್ನು ಸ್ವಚ್ಛಗೊಳಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಗಡಸರಾಯ್ ಆರೋಗ್ಯ ಕೇಂದ್ರದ ವೈದ್ಯ ಡಾ.ಚಂದ್ರಶೇಖರ್ ಟೇಕಂ ಈ ಕುರಿತು ಮಾತನಾಡಿ, ಕೆಲಸಕ್ಕೆ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಹಾಸಿಗೆಯನ್ನು ಸ್ವಚ್ಛಗೊಳಿಸಲು ಮಹಿಳೆಗೆ ಹೇಳಿಲ್ಲ. ಸಾಕ್ಷ್ಯವನ್ನು ಸಂಗ್ರಹಿಸಲು ರಕ್ತವನ್ನು ಬಟ್ಟೆಯಿಂದ ಒರೆಸಲು ಅವಕಾಶ ನೀಡಬೇಕೆಂದು ಮಹಿಳೆ ಕೇಳಿಕೊಂಡಿದ್ದರು. ರಕ್ತಸ್ರಾವದ ಪ್ರಮಾಣದ ಸಾಕ್ಷ್ಯ ಸಂಗ್ರಹಿಸಲು ಅವರು ಹೀಗೆ ಮಾಡಿದ್ದಾರೆ. ಈ ಬಗ್ಗೆ ಅವರ ಕುಟುಂಬದ ಕಡೆಯಿಂದ ಯಾವುದೇ ದೂರು ಬಂದಿಲ್ಲ", ಎಂದು ಹೇಳಿದ್ದಾರೆ.
ನಾಲ್ವರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಗಡಸರಾಯ್ ಪೊಲೀಸರು ಏಳು ಮಂದಿಯ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.