ತಮಿಳುನಾಡು | ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ (PTI)
ಚೆನ್ನೈ : ತಮಿಳುನಾಡಿನಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ರೈಲಿನಿಂದ ಹೊರಕ್ಕೆ ತಳ್ಳಿ ಹಾಕಿದ್ದು, ಘಟನೆ ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಮಹಿಳೆ ಶುಕ್ರವಾರ ಮುಂಜಾನೆ ತಿರುಪತ್ತೂರು ಜಿಲ್ಲೆಯ ಜೋಲಾರ್ ಪೆಟ್ಟೈ ಬಳಿ ರೈಲಿನ ವಾಶ್ ರೂಮ್ ಗೆ ಹೋಗುತ್ತಿದ್ದಾಗ ಇಬ್ಬರು ಪುರುಷರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕಿರುಚಾಡಿದ್ದು, ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ರೈಲಿನಿಂದ ಹೊರಗೆ ತಳ್ಳಿದ್ದಾರೆ.
ಘಟನೆಯಲ್ಲಿ ಕೊಯಮತ್ತೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಕೈ ಮತ್ತು ಕಾಲು ಮುರಿತಕ್ಕೆ ಒಳಗಾಗಿದ್ದು, ಆಕೆಯ ತಲೆಗೆ ಕೂಡ ಗಾಯವಾಗಿದೆ. ಆಕೆಯನ್ನು ಚಿಕಿತ್ಸೆಗಾಗಿ ವೆಲ್ಲೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಜೋಲಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೇಮರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ,
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗರ್ಭಿಣಿ ಮಹಿಳೆ ಮೇಲೆ ಇಬ್ಬರು ಪುರುಷರು ಲೈಂಗಿಕ ಕಿರುಕುಳ ನೀಡಿ ನಂತರ ರೈಲಿನಿಂದ ತಳ್ಳಿದ ಸುದ್ದಿ ಆಘಾತಕಾರಿಯಾಗಿದೆ. ತಮಿಳುನಾಡಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ರಸ್ತೆಯಲ್ಲಿ ನಡೆಯಲು ಸಾಧ್ಯವಿಲ್ಲ, ಶಾಲೆ, ಕಾಲೇಜುಗಳು ಅಥವಾ ಕೆಲಸದ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ, ಈಗ ರೈಲಿನಲ್ಲಿ ಕೂಡ ಪ್ರಯಾಣಿಸಲು ಸಾಧ್ಯವಿಲ್ಲ ಎಂಬುವುದು ನಾಚಿಕೆಗೇಡಿನ ವಿಷಯವಾಗಿದೆ. ಇಂತಹ ದೌರ್ಜನ್ಯಗಳು ಮುಂದುವರಿದಿರುವುದು ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಸೂಚಿಸುತ್ತದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.