ಧ್ವಂಸಗೊಳಿಸಿದ 600 ವರ್ಷ ಹಳೆಯ ಮಸೀದಿ ಜಾಗದಲ್ಲಿ ಯಥಾಸ್ಥಿತಿ ಕಾಪಾಡಿ ; ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ದಿಲ್ಲಿ ಹೈಕೋರ್ಟ್ ನಿರ್ದೇಶನ
Photo: scroll.in
ಹೊಸದಿಲ್ಲಿ: ಧ್ವಂಸಗೊಳಿಸಲಾಗಿರುವ 600 ವರ್ಷಗಳ ಹಿಂದಿನ ಅಖೊಂಡ್ಜಿ ಮಸೀದಿ ಇದ್ದ ಜಮೀನಿನಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಜನವರಿ 30ರಂದು, ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರ ರಾಜಧಾನಿಯ ಮೆಹ್ರಾಲಿ ಪ್ರದೇಶದಲ್ಲಿರುವ ಅಖೊಡ್ಜಿ ಮಸೀದಿ ಮತ್ತು ಬೆಹ್ರೂಲ್ ಉಲೂಮ್ ಮದರಸವನ್ನು ಬಲ್ಡೋಝರ್ ಬಳಸಿ ಧ್ವಂಸಗೊಳಿಸಿತ್ತು.
ದಿಲ್ಲಿ ಅಭಿವೃದ್ದಿ ಪ್ರಾಧಿಕಾರವು ಶಾಸನಾತ್ಮಕ ಸಂಸ್ಥೆಯಾಗಿದ್ದು, ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು ಅದರ ಜವಾಬ್ದಾರಿಯಾಗಿದೆ.
ದಿಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ, ದಿಲ್ಲಿ ವಕ್ಫ್ ಮಂಡಳಿಯ ಆಡಳಿತ ಮಂಡಳಿಯು ದಿಲ್ಲಿ ಹೈಕೋರ್ಟ್ಗೆ ತುರ್ತು ಅರ್ಜಿಯೊಂದನ್ನು ಸಲ್ಲಿಸಿತ್ತು. ಮಸೀದಿಯ ಇಮಾಮ್ ಝಾಕಿರ್ ಹುಸೈನ್ ಮತ್ತು ಅವರ ಕುಟುಂಬ ವಾಸಿಸುತ್ತಿದ್ದ ಮನೆಯನ್ನೂ ಧ್ವಂಸಗೊಳಿಸಲಾಗಿದ್ದು, ಅವರಿಗೆ ಈಗ ವಾಸಿಸಲು ಮನೆಯಿಲ್ಲ ಎಂಬುದಾಗಿ ಅರ್ಜಿಯಲ್ಲಿ ಹೇಳಲಾಗಿತ್ತು.
ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಸಚಿನ್ ದತ್ತ, ಫೆಬ್ರವರಿ 12ರವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು.
ಆದರೆ, ಮಸೀದಿ ಇದ್ದ ನಿರ್ದಿಷ್ಟ ಜಮೀನಿಗೆ ಮಾತ್ರ ಯಥಾಸ್ಥಿತಿ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಅದರ ಪಕ್ಕದ ಸ್ಥಳಗಳಲ್ಲಿ ಕಾರ್ಯಾಚರಣೆ ಮಾಡುವುದಕ್ಕೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿತು.
ಕಟ್ಟಡಗಳನ್ನು ಉರುಳಿಸುವ ಮೊದಲು ಪ್ರಾಧಿಕಾರವು ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ಮಸೀದಿ ಆಡಳಿತ ಸಮಿತಿಯ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ವಕೀಲ ಶಾಮ್ ಖ್ವಾಜ ಹೇಳಿದರು. ಅದೂ ಅಲ್ಲದೆ, ಕುರ್ ಆನ್ ಪ್ರತಿಗಳಿಗೆ ಹಾನಿ ಮಾಡಲಾಗಿದೆ, ಮದರಸದ ಮಕ್ಕಳಿಗೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಅವಕಾಶ ನೀಡಿಲ್ಲ ಮತ್ತು ಮಸೀದಿಯಲ್ಲಿದ್ದ ಎಲ್ಲಾ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಅವರು ಆರೋಪಿಸಿದರು.
ದಿಲ್ಲಿ ಸರಕಾರದ ಧಾರ್ಮಿಕ ಸಮಿತಿಯು ಜನವರಿ 4ರಂದು ಮಾಡಿರುವ ಶಿಫಾರಸುಗಳನ್ವಯ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಾಧಿಕಾರದ ವಕೀಲ ಸಂಜಯ್ ಕತ್ಯಾಲ್ ವಾದಿಸಿದರು. ‘‘ಮಸೀದಿ ಆಡಳಿತ ಸಮಿತಿಯು ಈ ವಿಷಯಕ್ಕೆ ಧಾರ್ಮಿಕ ಬಣ್ಣವನ್ನು ಕೊಡಲು ಪ್ರಯತ್ನಿಸುತ್ತಿದೆ’’ ಎಂದು ಅವರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಸೀದಿ ಆಡಳಿತ ಮಂಡಳಿಯ ವಕೀಲ ಖ್ವಾಜ, ಮಸೀದಿಯನ್ನು ಧ್ವಂಸಗೊಳಿಸುವ ಶಿಫಾರಸಿನ ವಿರುದ್ಧ ದಿಲ್ಲಿ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಖಿತ ಆಕ್ಷೇಪವನ್ನು ಸಲ್ಲಿಸಿದ್ದರು ಎಂದು ಹೇಳಿದರು.