ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೆರವೇರಿಸಬೇಕು : ಉದ್ಧವ್ ಠಾಕ್ರೆ ಆಗ್ರಹ
ಉದ್ಧವ್ ಠಾಕ್ರೆ | Photo: PTI
ಮುಂಬೈ : ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ರಾಷ್ಟ್ರೀಯ ಹೆಮ್ಮೆ ಮತ್ತು ದೇಶದ ಆತ್ಮ ಗೌರವದ ವಿಷಯವಾಗಿರುವುದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದನ್ನು ನೆರವೇರಿಸಬೇಕು ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಆಗ್ರಹಿಸಿದ್ದಾರೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಜ.22ರಂದು ತಾನು ನಾಸಿಕ್ ನ ಕಾಳಾರಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ರಾಷ್ಟ್ರಪತಿಗಳನ್ನು ಅಲ್ಲಿಗೆ ಆಹ್ವಾನಿಸುವುದಾಗಿ ಹೇಳಿದರು.
ಜ.22ರಂದು ತಾನು ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳೊಂದಿಗೆ ನಾಸಿಕ್ ನ ಐತಿಹಾಸಿಕ ಕಾಳಾರಾಮ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಮತ್ತು ಗೋದಾವರಿ ನದಿ ತೀರದಲ್ಲಿ ಮಹಾ ಆರತಿಯನ್ನು ನಡೆಸುವುದಾಗಿ ಠಾಕ್ರೆ ಈ ಹಿಂದೆ ಪ್ರಕಟಿಸಿದ್ದರು.
ಜ.23ರಂದು ನಾಸಿಕ್ನಲ್ಲಿ ಪಕ್ಷದ ಪದಾಧಿಕಾರಿಗಳ ಸಮಾವೇಶ ನಡೆಯಲಿದ್ದು, ಠಾಕ್ರೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಗುಜರಾತಿನ ಸೋಮನಾಥ ದೇವಸ್ಥಾನವು ಮರುಸ್ಥಾಪನೆಗೊಂಡ ಬಳಿಕ ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಅವರು ವಿಧ್ಯುಕ್ತ ಪುನರ್ಪ್ರತಿಷ್ಠಾ ಸಮಾರಂಭವನ್ನು ನೆರವೇರಿಸಿದ್ದರು ಎಂದು ಹೇಳಿದ ಠಾಕ್ರೆ,ಅಯೋಧ್ಯೆಯ ರಾಮ ಮಂದಿರವು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿರುವುದರಿಂದ ಮತ್ತು ದೇಶದ ಆತ್ಮಗೌರವಕ್ಕೆ ಸಂಬಂಧಿಸಿರುವುದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಬೇಕು ಎಂದರು.
ರಾಮ ಮಂದಿರ ಟ್ರಸ್ಟ್ ನ ನಿಯೋಗವೊಂದು ಶುಕ್ರವಾರ ರಾಷ್ಟ್ರಪತಿಗಳನ್ನು ಭೇಟಿಯಾಗಿ ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ವಿಧ್ಯುಕ್ತವಾಗಿ ಆಹ್ವಾನಿಸಿದೆ.
1992ರಲ್ಲಿ ‘ಕರ ಸೇವೆ ’ಯ ಭಾಗವಾಗಿದ್ದ ಶಿವಸೈನಿಕರನ್ನು ನಾಸಿಕ್ ನಲ್ಲಿ ಸನ್ಮಾನಿಸಲಾಗುವುದು ಎಂದೂ ಠಾಕ್ರೆ ತಿಳಿಸಿದರು.