ರಾಷ್ಟ್ರಪತಿ ವಿಧವೆ, ಆದಿವಾಸಿ; ಹಾಗಾಗಿ ಅವರನ್ನು ನೂತನ ಸಂಸತ್ ಗೆ ಆಹ್ವಾನಿಸಿಲ್ಲ: ಉದಯನಿಧಿ
ಉದಯನಿಧಿ ಸ್ಟಾಲಿನ್ | Photo: PTI
ಚೆನ್ನೈ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಧವೆ ಮತ್ತು ಆದಿವಾಸಿ; ಹಾಗಾಗಿ ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸಲಾಗಿಲ್ಲ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಬುಧವಾರ ಆರೋಪಿಸಿದ್ದಾರೆ.
ಸನಾತನ ಧರ್ಮವನ್ನು ಡೆಂಗಿ ಮತ್ತು ಮಲೇರಿಯಕ್ಕೆ ಹೋಲಿಸಿ ಅವರು ಈ ತಿಂಗಳ ಆದಿ ಭಾಗದಲ್ಲಿ ನೀಡಿರುವ ಹೇಳಿಕೆಯು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಅದರ ಕಾವು ಆರುವ ಮುನ್ನವೇ ಅವರು ಈಗ ಮತ್ತೊಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.
‘‘ನಿನ್ನೆ ಓರ್ವ ಹಿಂದಿ ಚಿತ್ರ ನಟಿಯನ್ನು ನೂತನ ಸಂಸತ್ ಕಟ್ಟಡಕ್ಕೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಗೆ ಹೋಗಲು ರಾಷ್ಟ್ರಪತಿಗೆ ಅನುಮತಿ ಇರಲಿಲ್ಲ’’ ಎಂದು ಮದುರೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯದ ಯುವ ವ್ಯವಹಾರಗಳು ಮತ್ತುಯ ಕ್ರೀಡಾ ಅಭಿವೃದ್ಧಿ ಸಚಿವ ಹೇಳಿದರು.
‘‘ಯಾಕೆ? ಯಾಕೆಂದರೆ ದ್ರೌಪದಿ ಮುರ್ಮು ಆದಿವಾಸಿ ಸಮುದಾಯದಿಂದ ಬಂದವರು. ಈಗ ಅವರು ವಿಧವೆ. ಇಂಥ ಮನೋಭಾವವನ್ನು ನಾವು ಸನಾತನ ಧರ್ಮ ಎಂದು ಕರೆಯುತ್ತೇವೆ’’ ಎಂದು ಅವರು ನುಡಿದರು.
ಮೇ ತಿಂಗಳಲ್ಲಿ ನಡೆದ ಸಂಸತ್ ಭವನದ ಉದ್ಘಾಟನೆಗೆ ಭಾರತೀಯ ಜನತಾ ಪಕ್ಷದ ಸರಕಾರವು ತಮಿಳುನಾಡಿನಿಂದ ಪುರೋಹಿತರನ್ನು ಆಹ್ವಾನಿಸಿತ್ತು, ಆದರೆ ಮುರ್ಮುರನ್ನು ಹೊರಗಿಟ್ಟಿತ್ತು ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮಗನೂ ಆಗಿರುವ ಉದಯನಿಧಿ ಹೇಳಿದರು.
ನೂತನ ಸಂಸತ್ನ ಉದ್ಘಾಟನಾ ಸಮಾರಂಭವನ್ನು 20ಕ್ಕೂ ಅಧಿಕ ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ರಾಷ್ಟ್ರಪತಿಯ ಬದಲಿಗೆ ತಾನೇ ಸಂಸತನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರವು ‘‘ರಾಷ್ಟ್ರಪತಿಗೆ ಮಾಡಿರುವ ಭಾರೀ ಅವಮಾನ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲೆ ನಡೆಸುವ ಪ್ರತ್ಯಕ್ಷ ದಾಳಿಯಾಗಿದೆ’’ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದವು. ‘‘ಈ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮದಿಂದ ಭಾರತದ ಮೊದಲು ಆದಿವಾಸಿ ರಾಷ್ಟ್ರಪತಿಯನ್ನು ಮೋದಿ ಹೊರಗಿಟ್ಟಿದ್ದಾರೆ’’ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದರು.
ಸನಾತನ ಧರ್ಮದ ವಿರುದ್ಧ ಧ್ವನಿ ಎತ್ತುವುದನ್ನು ದ್ರಾವಿಡ ಮುನ್ನೇತ್ರ ಕಳಗಂ ಮುಂದುವರಿಸುತ್ತದೆ ಎಂದು ಉದಯನಿಧಿ ಹೇಳಿದರು. ‘‘ನನ್ನ ಹತ್ಯೆಗೆ ಕರೆ ನೀಡುವ ಮತ್ತು ನನ್ನ ತಲೆಗೆ ಬಹುಮಾನ ಘೋಷಿಸುವ ಪುರೋಹಿತರಿಗೆ ನಾನು ಹೆದರುವುದಿಲ್ಲ’’ ಎಂದು ಅವರು ಘೋಷಿಸಿದರು.
ಸನಾತನ ಧರ್ಮ ಕುರಿತ ಹೇಳಿಕೆಗಾಗಿ ಉದಯನಿಧಿ ವಿರುದ್ಧ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಎರಡು ಮೊಕದ್ದಮೆಗಳು ದಾಖಲಾಗಿವೆ.