ʼದಿ ಕಾರವಾನ್ʼ ವರದಿ ತೆಗೆದುಹಾಕುವಂತೆ ಸೂಚಿಸಿದ ಸರ್ಕಾರದ ಆದೇಶ ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ
"ಸರ್ಕಾರದ ಆದೇಶವು ಮಾಧ್ಯಮ ಸ್ವಾತಂತ್ರ್ಯದ ದಮನವಾಗಿದೆ"
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಸೇನೆಯ ಕಸ್ಟಡಿಯಲ್ಲಿದ್ದ ನಾಗರಿಕರ ಸಾವಿಗೆ ಸಂಬಂಧಿಸಿದಂತೆ ದಿ ಕಾರವಾನ್ ಮ್ಯಾಗಝಿನ್ ಪ್ರಕಟಿಸಿದ ವರದಿಯನ್ನು ತೆಗೆದುಹಾಕುವಂತೆ ʼದಿ ಕ್ಯಾರವಾನ್ ಮ್ಯಾಗಝಿನ್ʼಗೆ ಸೂಚನೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ತನ್ನ ಆತಂಕ ತೋಡಿಕೊಂಡಿದೆ.
ಸರ್ಕಾರದ ಆದೇಶವು ಮಾಧ್ಯಮ ಸ್ವಾತಂತ್ರ್ಯದ ದಮನವಾಗಿದೆಎಂದು ಹೇಳಿದೆ. ಭಾರತದ ಮಾದ್ಯಮ ಸ್ವಾತಂತ್ರ್ಯ ರ‍್ಯಾಂಕಿಂಗ್ 180 ದೇಶಗಳ ಪೈಕಿ 161 ಆಗಿರುವುದು ಇದಕ್ಕೆ ಪುರಾವೆಯಾಗಿದೆ ಹಾಗೂ ಸರ್ಕಾರ ಇದನ್ನು ಅಲ್ಲಗಳೆದರೂ ಸತ್ಯವನ್ನು ಬದಲಾಯಿಸಲಾಗದು,” ಎಂದು ಹೇಳಿದೆ.
ಸರ್ಕಾರ ತನ್ನ ಆದೇಶ ವಾಪಸ್ ಪಡೆದುಕೊಳ್ಳಬೇಕೆಂದೂ ಪ್ರೆಸ್ ಕ್ಲಬ್ ಆಗ್ರಹಿಸಿದೆ.
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ನಾಗರಿಕರಿಗೆ ಚಿತ್ರಹಿಂಸೆಗೆ ಸಂಬಂಧಿಸಿದ ವರದಿಯನ್ನು 24 ಗಂಟೆಗಳೊಳಗೆ ತೆಗೆದು ಹಾಕುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದಿ ಕಾರವಾನ್ ಸುದ್ದಿ ಮ್ಯಾಗಜೀನ್‌ಗೆ ಐಟಿ ಕಾಯಿದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶಿಸಿತ್ತು.
ಜತೀಂದರ್ ಕೌರ್ ತುರ್ ಅವರು ಬರೆದಿರುವ “ಸ್ಕ್ರೀಮ್ಸ್ ಫ್ರಮ್ ದಿ ಆರ್ಮಿ ಪೋಸ್ಟ್” ಎಂಬ ಸುದ್ದಿಯ ವರದಿ ಮತ್ತು ವೀಡಿಯೋ ಅನ್ನು 24 ಗಂಟೆಗಳೊಳಗೆ ತೆಗೆದುಹಾಕಬೇಕೆಂದು ಆದೇಶಿಸಲಾಗಿದೆ ಎಂದ ದಿ ಕಾರವಾನ್ ಹೇಳಿತ್ತು.
ದಿ ಕಾರವಾನ್ ಈ ಆದೇಶವನ್ನು ಪಾಲಿಸದೇ ಇದ್ದರೆ ವರದಿಗೆ ಸಂಬಂಧಿಸಿದ ಯುಆರ್‌ಎಲ್ ಅನ್ನು ಬ್ಲಾಕ್ ಮಾಡಲಾಗುವುದು ಎಂದೂ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಪೂಂಜ್-ರಜೌರಿ ಪ್ರದೇಶದಲ್ಲಿ ಉಗ್ರವಾದಿಗಳೊಂದಿಗಿನ ಗುಂಡಿನ ಚಕಮಕಿಯ ನಂತರ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್ ವಿಚಾರಣೆಗೆಂದು ಕರೆದೊಯ್ದ ಮೂವರು ನಾಗರಿಕ ಸಾವಿಗೆ ಸಂಬಂಧಿಸಿದ ವರದಿಯನ್ನು ದಿ ಕಾರವಾನ್ ಪ್ರಕಟಿಸಿತ್ತು.
ಸರ್ಕಾರದ ಆದೇಶ ಪಾಲಿಸಲಾಗುವುದು ಹಾಗೂ ಅದೇ ಸಮಯ ಅದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ದಿ ಕಾರವಾನ್ ಹೇಳಿದೆ.