ಪತ್ರಿಕಾ ಸ್ವಾತಂತ್ರ್ಯ: ಭಾರತಕ್ಕೆ 159ನೇ ಸ್ಥಾನ
ಸಾಂದರ್ಭಿಕ ಚಿತ್ರ \ PC ; Canva
ನೆರೆಯ ರಾಷ್ಟ್ರಗಳಾದ Pak, Sri Lanka, Nepal, Maldivesಗಿಂತಲೂ ಕಳಪೆ ರ್ಯಾಂಕಿಂಗ್!
ಹೊಸದಿಲ್ಲಿ : 2024ರ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 159ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕಿಂತ ಎರಡು ರ್ಯಾಂಕ್ ಮೇಲಕ್ಕೇರಿದೆ. 2023ರಲ್ಲಿ ಅದರ ರ್ಯಾಂಕಿಂಗ್ 161 ಆಗಿತ್ತು.
‘‘2014ರಲ್ಲಿ ಬಿಜೆಪಿಯ ನಾಯಕ ಹಾಗೂ ಬಲಪಂಥೀಯ ಹಿಂದೂ ರಾಷ್ಟ್ರವಾದಿ ನರೇಂದ್ರ ಮೋದಿ ಆಡಳಿತ ವಹಿಸಿದಾಗಿನಿಂದ ಪತ್ರಕರ್ತರ ವಿರುದ್ಧ ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ, ಮಾಧ್ಯಮ ಮಾಲಕತ್ವವು ಅತ್ಯಂತ ಕೇಂದ್ರೀಕೃತಗೊಂಡಿರುವುದು ಹಾಗೂ ರಾಜಕೀಯ ನಿಷ್ಠೆಯನ್ನು ಹೊಂದಿರುವುದು ಇವೆಲ್ಲವುಗಳಿಂದಾಗಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ (ಆರ್ಎಸ್ಎಫ್) ಗುರುವಾರ ಪ್ರಕಟಿಸಿದ ವರದಿ ತಿಳಿಸಿದೆ.
‘ಏಶ್ಯ-ಪೆಸಿಫಿಕ್: ನಿರಂಕುಶವಾದಿ ಸರಕಾರಗಳ ಆಡಳಿತದಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ’ ಶೀರ್ಷಿಕೆಯ ಈ ವರದಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ಎರಡು ರ್ಯಾಂಕ್ ಮೇಲಕ್ಕೇರಿದೆ. ಈ ಮೊದಲು ಭಾರತಕ್ಕಿಂತ ರ್ಯಾಂಕಿಂಗ್ ನಲ್ಲಿ ಮೇಲೆ ಇದ್ದ ದೇಶಗಳು ಈ ಸಲ ಕಳಪೆ ನಿರ್ವಹಣೆಯನ್ನು ಪ್ರದರ್ಶಿಸಿರುವುದೇ ಇದಕ್ಕೆ ಕಾರಣವಾಗಿದೆ. ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಇನ್ನಷ್ಟು ಕರಾಳ ಕಾನೂನುಗಳನ್ನು ಜಾರಿಗೊಳಿಸಿದ ಹೊರತಾಗಿಯೂ ಭಾರತವು ಎರಡು ರ್ಯಾಂಕ್ ಮೇಲಕ್ಕೇರಿದೆ. ಆದರೂ ಅದರ ನೂತನ ಸ್ಥಾನವು ಪ್ರಜಾಪ್ರಭುತ್ವಕ್ಕೆ ಯೋಗ್ಯವೆನಿಸುವುದಿಲ್ಲವೆಂದು ವರದಿ ಅಭಿಪ್ರಾಯಿಸಿದೆ.
2014ರಲ್ಲಿ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ವಿವಿಧ ವಿಷಯಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಯು ಹದಗೆಟ್ಟಿದೆ ಎಂದು ಆರ್ಎಸ್ಎಫ್ ಹೇಳಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ವರಿಷ್ಠ , ಪ್ರಧಾನಿಯವರ ಖಾಸಾ ಸ್ನೇಹಿತ ಮುಕೇಶ್ ಅಂಬಾನಿ 70ಕ್ಕೂ ಅಧಿಕ ಮಾದ್ಯಮ ಸಂಸ್ಥೆಗಳ ಒಡೆತನವನ್ನು ಹೊಂದಿದ್ದು, ಅವುಗಳನ್ನು ಕನಿಷ್ಠ 80 ಕೋಟಿ ಭಾರತೀಯರು ಫಾಲೋ ಮಾಡುತ್ತಿದ್ದಾರೆ. ಮೋದಿಯ ಇನ್ನೋರ್ವ ನಿಕಟವರ್ತಿಯಾದ ಗೌತಮ್ ಅದಾನಿ ಅವರು 2022ರಲ್ಲಿ ಎನ್ಡಿಟಿವಿ ಸುದ್ದಿವಾಹಿನಿಯನ್ನು ಖರೀದಿಸುವುದರೊಂದಿಗೆ, ದೇಶದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಬಹುತ್ವವು ಅಂತ್ಯಗೊಂಡಿದೆ. ಇತ್ತೀಚಿನ ವರ್ಷಗಳು ಬಿಜೆಪಿ ಹಾಗೂ ಮೋದಿ ನಿಷ್ಠ ಮಾಧ್ಯಮಗಳ ಬೆಳವಣಿಗೆಗೆ ಸಾಕ್ಷಿಗಳಾಗಿವೆ. ಒತ್ತಡ ಹಾಗೂ ಪ್ರಭಾವದಿಂದಾಗಿ ಭಾರತದ ಹಳೆಯ ಮಾದರಿಯಾದ ಬಹುತ್ವವಾದಿ ಪತ್ರಿಕಾರರಂಗವು ಪ್ರಶ್ನಿಸಲ್ಪಡುತ್ತಿದೆ. ಪ್ರಧಾನಿಯವರು ಪತ್ರಕರ್ತರ ಕಟು ಟೀಕಾಕಾರರಾಗಿದ್ದಾರೆ. ಬೆಂಬಲಿಗರೊಂದಿಗಿನ ತನ್ನ ನಂಟನ್ನು ಕಲುಷಿತಗೊಳಿಸುವ ಮಧ್ಯವರ್ತಿಗಳೆಂಬಂತೆ ಅವರನ್ನು ಕಾಣುತ್ತಿದ್ದಾರೆ. ಸರಕಾರವನ್ನು ತೀವ್ರವಾಗಿ ಟೀಕಿಸುವ ಪತ್ರಕರ್ತರು, ಬಿಜೆಪಿ ಬೆಂಬಲಿತ ಟ್ರೋಲ್ ಗಳ ಮೂಲಕ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ವರದಿ ಹೇಳಿದೆ.
ಸರಕಾರಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಪತ್ರಿಕೋದ್ಯಮಕ್ಕೆ ಅತ್ಯುತ್ತಮವಾದ ವಾತಾವರಣವನ್ನು ಹಾಗೂ ವಿಶ್ವಸನೀಯ, ಸ್ವತಂತ್ರ ಹಾಗೂ ವೈವಿಧ್ಯಮಯ ಸುದ್ದಿಗಳು ಹಾಗೂ ಮಾಹಿತಿಯನ್ನು ಪಡೆಯುವ ಸಾರ್ವಜನಿಕರ ಹಕ್ಕನ್ನು ಖಾತರಿಪಡಿಸುವಲ್ಲಿ ವಿಫಲವಾಗಿವೆ ಎಂದು ಆರ್ಎಸ್ಎಫ್ ವರದಿ ತಿಳಿಸಿದೆ.
ಪತ್ರಿಕಾ ಸ್ವಾತಂತ್ರ್ಯದ ರ್ಯಾಂಕಿಂಗ್ ನಲ್ಲಿ ಭಾರತಕ್ಕಿಂತ ಅದರ ನೆರೆಹೊರೆಯ ದೇಶಗಳು ತುಸು ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿವೆ. ಪಾಕಿಸ್ತಾನ 152, ಶ್ರೀಲಂಕಾ 15, ನೇಪಾಳ 7 ಹಾಗೂ ಮಾಲ್ದೀವ್ಸ್ 106ನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನ 178, ಬಾಂಗ್ಲಾದೇಶ 165 ಹಾಗೂ ಮ್ಯಾನ್ಮಾರ್ 171ನೇ ಸ್ಥಾನದಲ್ಲಿದೆ.