ಬಿಜೆಪಿ ಸೇರುವಂತೆ ಪ್ರತಿಪಕ್ಷ ನಾಯಕರ ಮೇಲೆ ಒತ್ತಡ: ಸೋನಿಯಾ ಗಾಂಧಿ ಆರೋಪ
ಪ್ರಜಾಪ್ರಭುತ್ವವನ್ನು ಪ್ರಧಾನಿ ಮೋದಿ ‘ನಾಶಪಡಿಸುತ್ತಿದ್ದಾರೆ’ ಎಂದ ಕಾಂಗ್ರೆಸ್ ನಾಯಕಿ
ಸೋನಿಯಾ ಗಾಂಧಿ | Photo: PTI
ಜೈಪುರ: ಲೋಕಸಭಾ ಚುನಾವಣೆಗೆ ಮುನ್ನ, ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಗೊಳ್ಳುವಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಆರೋಪಿಸಿದ್ದಾರೆ. ದೇಶವನ್ನು ಮತ್ತು ಅದರ ಪ್ರಜಾಪ್ರಭುತ್ವವನ್ನು ಪ್ರಧಾನಿ ನರೇಂದ್ರ ಮೋದಿ ‘‘ನಾಶಪಡಿಸುತ್ತಿದ್ದಾರೆ’’ ಎಂದು ಅವರು ಹೇಳಿದರು.
‘‘ಇಂದು ನಮ್ಮ ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ನಮ್ಮ ಸಂವಿಧಾನವನ್ನು ಬದಲಿಸಲು ಪಿತೂರಿ ನಡೆಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ, ನಿರುದ್ಯೋಗ, ಹಣದುಬ್ಬರ, ಅಸಮಾನತೆ ಮತ್ತು ದೌರ್ಜನ್ಯಗಳನ್ನು ಹೆಚ್ಚಿಸಲು ಸರಕಾರವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಈ ಅವಧಿಯಲ್ಲಿ ಮೋದಿ ಸರಕಾರ ಏನು ಮಾಡಿತೋ ಅವುಗಳೆಲ್ಲ ಈಗ ನಮ್ಮೆಲ್ಲರ ಕಣ್ಣ ಮುಂದೆಯೇ ಇವೆ’’ ಎಂದು ಜೈಪುರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ ಹೇಳಿದರು.
‘‘ತನ್ನನ್ನು ತಾನು ಶ್ರೇಷ್ಠ ಎಂಬುದಾಗಿ ಪರಿಗಣಿಸಿರುವ ಮೋದೀಜಿ, ನಮ್ಮ ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಚಿಂದಿಚೂರು ಮಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಪಕ್ಷದ ಪ್ರಣಾಳಿಕೆ ‘ನ್ಯಾಯಪತ್ರ’ವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮುಂತಾದ ಪಕ್ಷದ ನಾಯಕರು ಭಾಗವಹಿಸಿದರು.
ಇದಕ್ಕೂ ಮೊದಲು ಮಾತನಾಡಿದ ಪ್ರಿಯಾಂಕಾ ಗಾಂಧಿ, ಕೇಂದ್ರದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿಯು ಪ್ರತಿಪಕ್ಷಗಳನ್ನು ದಮನಿಸುತ್ತಿದೆ ಎಂದು ಆರೋಪಿಸಿದರು. ಅವರು ಇದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರ ಬಂಧನಗಳನ್ನು ಉದಾಹರಣೆಯಾಗಿ ನೀಡಿದರು.