ದೇಶದಲ್ಲಿ ಮೊದಲ ಬುಲೆಟ್ ರೈಲು ಸಂಚರಿಸುವ ಸಮಯ ದೂರವಿಲ್ಲ: ಪ್ರಧಾನಿ
ನರೇಂದ್ರ ಮೋದಿ | PC : PTI
ಕೋಲ್ಕತಾ : ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚರಿಸುವ ಸಮಯ ದೂರ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಜಮ್ಮು ವಿಭಾಗ ಸೇರಿದಂತೆ ದೇಶದ ವಿವಿಧ ರೈಲು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮೋದಿ, ರೈಲ್ವೆ ಕಳೆದ ಒಂದು ದಶಕದಲ್ಲಿ ಐತಿಹಾಸಿಕ ಬದಲಾವಣೆಗೆ ಒಳಗಾಗಿದೆ ಎಂದರು.
ಇದು ಭಾರತದ ವರ್ಚಸ್ಸು ಬದಲಾವಣೆಯಾಗಲು ಹಾಗೂ ಜನರ ಆತ್ಮಸ್ಥೈರ್ಯ ಹೆಚ್ಚಲು ಕಾರಣವಾಗಿದೆ ಎಂದು ಅವರು ಹೇಳಿದರು. ತೆಲಂಗಾಣ, ಒಡಿಶಾ, ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರು ತಮ್ಮ ರಾಜ್ಯಗಳಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಜನರು ದೂರ ಪ್ರಯಾಣಕ್ಕೆ ಕಡಿಮೆ ಸಮಯ ತಗಲುವ ಸಂಚಾರ ವ್ಯವಸ್ಥೆಯನ್ನು ಹೆಚ್ಚು ಬಯಸುತ್ತಾರೆ. ಇದು ಹೈಸ್ಪೀಡ್ ರೈಲುಗಳ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. 50 ಮಾರ್ಗಗಳಲ್ಲಿ 136ಕ್ಕಿಂತಲೂ ಅಧಿಕ ವಂದೇ ಮಾತರಂ ರೈಲುಗಳು ಸಂಚರಿಸುತ್ತಿವೆ ಎಂದು ಅವರು ತಿಳಿಸಿದರು.
ವಂದೇ ಭಾರತ್ ರೈಲು ಗಂಟೆಗೆ 180 ಕಿಲೋಮೀಟರ್ ವೇಗವನ್ನು ಸಾಧಿಸಿದ ಇತ್ತೀಚೆಗಿನ ಯಶಸ್ವಿ ಪ್ರಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ಕಳೆದ ದಶಕದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗಿದ್ದು, ಇದು ಐತಿಹಾಸಿಕ ಪರಿವರ್ತನೆಯಾಗಿದೆ ಎಂದರು.