ಜಾತ್ಯತೀತ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿ ಕರೆ | ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಪ್ರತಿಪಾದನೆ
ಕೆಂಪುಕೋಟೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಭಾಷಣ
ನರೇಂದ್ರ ಮೋದಿ | PTI
ಹೊಸದಿಲ್ಲಿ : ದಿಲ್ಲಿಯ ಕೆಂಪುಕೋಟೆಯಲ್ಲಿ ಬುಧವಾರ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರವನ್ನುದ್ದೇಶಿಸಿ ಭಾಷಣ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ಯ ಜಾರಿಗೆ ಕರೆ ನೀಡಿದ್ದಾರೆ ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯ ಅಗತ್ಯವನ್ನು ಕೂಡಾ ಬಲವಾಗಿ ಪ್ರತಿಪಾದಿಸಿದ್ದಾರೆ.
ಸತತ ಮೂರನೇ ಅವಧಿಗೆ ಎನ್ ಡಿ ಎ ಸರಕಾರದ ಪ್ರಧಾನಿಯಾಗಿ ಸ್ವಾತಂತ್ರ್ಯತ್ಸೋವದ ಭಾಷಣ ಮಾಡಿದ ಮೋದಿ , ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಸುಪ್ರೀಂಕೋರ್ಟ್ ಆಗಾಗ್ಗೆ ಚರ್ಚಿಸುತ್ತಾ ಬಂದಿದೆ ಹಾಗೂ ಆ ಬಗ್ಗೆ ನಿರ್ದೇಶಗಳನ್ನು ಕೂಡಾ ನೀಡುತ್ತಿದೆ. ಈಗಿರುವ ‘ನಾಗರಿಕ ಸಂಹಿತೆ’ಯು ತಾರತಮ್ಯವಾದಿ ಹಾಗೂ ಕೋಮುವಾದಿ ಎಂದು ಹಲವರು ಭಾವಿಸಿದ್ದಾರೆ. ಸಂವಿಧಾನದ ನಿರ್ಮಾತೃಗಳ ಆಶಯದ ಪ್ರತಿಬಿಂಬವೆಂಬಂತೆ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಇವೆರಡೂ ಸಮಾನ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಬೆಂಬಲಿಸುತ್ತಿದೆ. ಹೀಗಾಗಿ ಈ ಧ್ಯೇಯವನ್ನು ಈಡೇರಿಸುವುದು ಮುಖ್ಯವೆಂದು ಅವರು ಹೇಳಿದರು.
ಭಾರತವು ಸಮಾನ ನಾಗರಿಕ ಸಂಹಿತೆಯನ್ನು ಹೊಂದುದುವುದು ಈ ಸಮಯದ ಅಗತ್ಯವಾಗಿದೆ. ಕೋಮುವಾದಿ ನಾಗರಿಕ ಸಂಹಿತೆಯೊಂದಿಗೆ ನಾವು 75 ವರ್ಷಗಳ ಕಾಲ ಬದುಕುತ್ತಾ ಬಂದಿದ್ದೇವ. ನಾವು ಈಗ ಜಾತ್ಯತೀತ ನಾಗರಿಕ ಸಂಹಿತೆಯೆಡೆಗೆ ಸಾಗಬೇಕಾಗಿದೆ. ಆಗ ಮಾತ್ರವೇ ಧರ್ಮಾಧಾರಿತ ತಾರತಮ್ಯ ಕೊನೆಗೊಳ್ಳಲಿದೆ ಎಂದರು.
‘ ಒಂದು ದೇಶ, ಒಂದು ಚುನಾವಣೆ’ಯ ಉಪಕ್ರಮವನ್ನು ಬೆಂಬಲಿಸಲು ಎಲ್ಲಾ ಪೌರರು ಒಗ್ಗೂಡುವಂತೆ ಮೋದಿ ಕರೆ ನೀಡಿದರು. ಆಗಾಗ್ಗೆ ಚುನಾವಣೆಗಳ ನಡೆಸುವುದರಿಂದ ದೇಶದ ಪ್ರಗತಿಗೆ ಅಡ್ಡಿಯಾಗುತ್ತದೆ. ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಆಡಳಿತದಲ್ಲಿ ದಕ್ಷತೆಯನ್ನು ಖಾತರಿಪಡಿಸಲು ‘ಒಂದೇ ರಾಷ್ಟ್ರ ಒಂದು ಚುನಾವಣೆ’ ಪರಿಕಲ್ಪನೆಯ ಅಗತ್ಯವೆಂದು ಅವರು ಹೇಳಿದರು.
ತನ್ನ ಸರಕಾರವು ಜಾರಿಗೊಳಿಸಿದ ಬೃಹತ್ ಸುಧಾರಣೆಗಳು ಮಧ್ಯಮವರ್ಗ ಹಾಗೂ ಬಡಜನರ ಬದುಕುಗಳನ್ನು ಬದಲಾಯಿಸುವಲ್ಲಿ ಸಫಲವಾಗಿವೆ ಎಂದರು. ಭಾರತದ ಪ್ರಗತಿಯನ್ನು ಸಹಿಸದವರ ವಿರುದ್ಧ ಎಚ್ಚರಿಕೆ ವಹಿಸುವಂತೆ ಅವರು ಜನತೆಗೆ ಕರೆ ನೀಡಿದರು.
►ದೇಶಕ್ಕೆ ಹಾನಿಯೆಸಗುವವರಿಗೆ ಸೇನೆಯಿಂದ ಸೂಕ್ತ ಉತ್ತರ
‘‘ಭಾರತವು ಭಯೋತ್ಪಾಕ ದಾಳಿಗೆ ಬಲಿಪಶುವಾಗುತ್ತಿದ್ದ ದಿನಗಳಿದ್ದವು. ಆದರೆ ಆ ಕಾಲ ಈಗ ಹೋಗಿದೆ. ನಮ್ಮ ಸಶಸ್ತ್ರ ಪಡೆಗಳು ದೇಶದಕ್ಕೆ ಹಾನಿ ಮಾಡುವವರು ಯಾರೇ ಆದರೂ ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತಿದ್ದಾರೆ ’’ಎಂದು ಪ್ರಧಾನಿ ತನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
ರಕ್ಷಣೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಉಪಕ್ರಮಗಳನ್ನು ಕೂಡಾ ಅವರು ತನ್ನ ಭಾಷಣದಲ್ಲಿ ವಿವರಿಸಿದರು.ತಾಯ್ನಾಡಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ವೀರ ಯೋಧರ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ ಎಂದರು. 2023-24ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆಯು 1.27 ಲಕ್ಷ ಕೋಟಿ ರೂ.ಗಳ ದಾಖಲೆಯ ಏರಿಕೆಯನ್ನು ಕಂಡಿದೆ ಎಂದರು.
►ಮಹಿಳೆಯರ ವಿರುದ್ಧದ ಅಪರಾಧಗಳಿಗೆ ನೀಡುವ ಶಿಕ್ಷೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕಾಗಿದೆ
ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ತುರ್ತು ಅಗತ್ಯವಿದೆಯೆಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಮಹಿಳೆಯರ ವಿರುದ್ದ ದೌರ್ಜನ್ಯಗಳನ್ನು ಎಸಗುವವರಿಗೆನ ನೀಡುವ ಶಿಕ್ಷೆಗಳ ಬಗ್ಗೆ ವ್ಯಾಪಕವಾಗಿ ಪ್ರಚಾರವನ್ನು ಮಾಡಬೇಕಾಗಿದೆ ಇದರಿಂದಾಗಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳನ್ನು ಎಸಗಿದಲ್ಲಿ ಉಟಾಗುವ ಪರಿಣಾಮಗಳ ಬಗ್ಗೆ ಭೀತಿ ಮೂಡುತ್ತದೆ’’ ಎಂದವರು ಹೇಳಿದರು.
ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸಬೇಕಾಗಿದೆ ಹಾಗೂ ಇಂತಹ ರಾಕ್ಷಸೀ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ ಎಂದವರು ಹೇಳಿದರು.
ಇಂದು ಕೆಂಪುಕೋಟೆಯಲ್ಲಿ ನಿಂತುಕೊಂಡು ನನ್ನ ನೋವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಒಂದು ಸಮಾಜವಾಗಿ ನಮ್ಮ ತಾಯಂದಿರು, ಸೋದರಿಯರು ಹಾಗೂ ಪುತ್ರಿಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಮಹಿಳೆಯರ ವಿರುದ್ಧ ಹೇಯ ಅಪರಾಧಗಳನ್ನು ಎಸಗುವವರು ತಮಗೆ ಗಲ್ಲು ಶಿಕ್ಷೆ ಕಾದಿದೆಯೆಂಬುದನನ್ನು ಅರಿತುಕೊಳ್ಳಬೇಕೆಂದುು ಪ್ರಧಾನಿ ಹೇಳಿದರು.
ಕೋಲ್ಕತಾದ ಸರಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯೆಯೊಬ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿರುವ ಸಮಯದಲ್ಲಿಯೇ ಪ್ರಧಾನಿ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.