ಪ್ರಧಾನಿ ಮೋದಿಗೆ ನೈಜೀರಿಯಾದಿಂದ ಪ್ರತಿಷ್ಠಿತ ಜಿಸಿಒಎನ್ ಪ್ರಶಸ್ತಿ ಪ್ರದಾನ
ರಾಣಿ ಎಲಿಜಬೆತ್ ಬಳಿಕ ಈ ಪ್ರಶಸ್ತಿಗೆ ಭಾಜನರಾದ ಎರಡನೇ ವಿದೇಶಿ ಗಣ್ಯ
ಅಬುಜಾ : ನೈಜೀರಿಯಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಗೊಳಿಸುವ ಮಹತ್ವದ ಕ್ರಮವೊಂದರಲ್ಲಿ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ರವಿವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್(ಜಿಸಿಒಎನ್)’ ಪ್ರಶಸ್ತಿಯನ್ನು ಪ್ರದಾನಿಸಿದರು.
ಈ ಪ್ರತಿಷ್ಠಿತ ಪ್ರಶಸ್ತಿಯು ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವವಾಗಿದ್ದು,ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಇದು ಮೋದಿಯವರಿಗೆ ವಿದೇಶಿ ರಾಷ್ಟ್ರವು ನೀಡುತ್ತಿರುವ 17ನೇ ಪ್ರಶಸ್ತಿ ಗೌರವವಾಗಿದೆ. ರಾಣಿ ಎಲಿಜಬೆತ್ ಅವರು ಈ ಪ್ರಶಸ್ತಿಯನ್ನು ಪಡೆದಿರುವ ಈವರೆಗಿನ ಏಕೈಕ ವಿದೇಶಿ ವ್ಯಕ್ತಿಯಾಗಿದ್ದಾರೆ. 1969ರಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಅಬುಜಾದ ಅಸೋ ರಾಕ್ ಪ್ರೆಸಿಡೆನ್ಶಿಯಲ್ ವಿಲ್ಲಾದಲ್ಲಿ ನಡೆದ ದ್ವಿಪಕ್ಷೀಯ ಸಭೆಗೆ ಮೋದಿಯವರನ್ನು ಟಿನುಬು ಆತ್ಮೀಯವಾಗಿ ಬರಮಾಡಿಕೊಂಡಿದ್ದು,ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.
ಅಬುಜಾಕ್ಕೆ ಬಂದಿಳಿದ ಮೋದಿಯವರನ್ನು ಭಾರತದ ರಾಷ್ಟ್ರಗೀತೆಯೊಂದಿಗೆ ಸ್ವಾಗತಿಸಲಾಯಿತು. ಬಳಿಕ ಅವರು ಗೌರವ ರಕ್ಷೆ ಮತ್ತು 21-ಕುಶಾಲು ತೋಪು ವಂದನೆಯನ್ನು ಸ್ವೀಕರಿಸಿದರು.
ಅಧ್ಯಕ್ಷ ಟಿನುಬು ಅವರು,‘ಈ ಗೌರವವು ನೈಜೀರಿಯಾದ ಪಾಲುದಾರನಾಗಿ ಭಾರತಕ್ಕೆ ನಮ್ಮ ಮೆಚ್ಚುಗೆಯ ಸೂಚಕವಾಗಿದೆ’ ಎಂದು ಒತ್ತಿ ಹೇಳಿದರು.
ಗೌರವವು 2007ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ಉಭಯ ದೇಶಗಳ ನಡುವಿನ ಬಲವಾದ ವ್ಯೆಹಾತ್ಮಕ ಪಾಲುದಾರಿಕೆಗೆ ಒತ್ತು ನೀಡಿದೆ. ಸಿಂಗ್ ಭೇಟಿಯ ಬಳಿಕ 17 ವರ್ಷಗಳಲ್ಲಿ ಇದು ನೈಜೀರಿಯಾಕ್ಕೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ.
ಅಧ್ಯಕ್ಷ ಟಿನುಬು ಮತ್ತು ಪ್ರಧಾನಿ ಮೋದಿ ಅವರು ಪ್ರಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸಲು ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು ಮತ್ತು ಸಹಿ ಹಾಕಿದ ಒಡಂಬಡಿಕೆಗಳನ್ನು ಪರಸ್ಪರ ವಿನಿಮಯಿಸಿಕೊಂಡರು. ಉಭಯ ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆಗಳೂ ನಡೆದವು.
ನೈಜೀರಿಯಾ ಮತ್ತು ಭಾರತ ತಮ್ಮ ವ್ಯೆಹಾತ್ಮಕ ಪಾಲುದಾರಿಕೆಯ ಬಲವರ್ಧನೆಯನ್ನು ಮುಂದುವರಿಸಿದ್ದು, ಮೋದಿಯವರ ಭೇಟಿಯು ಆರ್ಥಿಕ ಅಭಿವೃದ್ಧಿ,ಇಂಧನ ಮತ್ತು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ.
ನೈಜೀರಿಯಾದಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚಿನ ಭಾರತೀಯ ಕಂಪನಿಗಳಿಂದ 27 ಶತಕೋಟಿ ಅಮೆರಿಕನ್ ಡಾಲರ್‌ಗಳ ಹೂಡಿಕೆಯೊಂದಿಗೆ ದ್ವಿಪಕ್ಷೀಯ ಸಂಬಂಧವು ಇನ್ನಷ್ಟು ಬೆಳವಣಿಗೆ ಮತ್ತು ಸಹಕಾರಕ್ಕೆ ಸಜ್ಜಾಗಿದೆ.