‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಗೆ ಪ್ರಧಾನಿ ಮೋದಿ ಚಾಲನೆ
ನರೇಂದ್ರ ಮೋದಿ | Photo: PTI
ರಾಂಚಿ(ಜಾರ್ಖಂಡ್): ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯು ದೇಶದ ಬಡವರು,ಮಹಿಳೆಯರು,ರೈತರು ಮತ್ತು ಯುವಜನರಿಗೆ ಮೋದಿಯ ಗ್ಯಾರಂಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಇಲ್ಲಿ ಪ್ರತಿಜ್ಞೆ ಮಾಡಿದರು.
ಬುಡಕಟ್ಟು ಜನಾಂಗದ ಆದರ್ಶ ಪುರುಷ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹಾತುವಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯು ಈ ದೇಶದ ಬಡವರು, ಮಹಿಳೆಯರು,ರೈತರು ಮತ್ತು ಯುವಜನರಿಗೆ ಒಂದು ರೀತಿಯ ಗ್ಯಾರಂಟಿಯಾಗಿದೆ ಎಂದು ಹೇಳಿದರು.
ಮುಂಡಾ ಅವರ ಜನ್ಮದಿನ ಮತ್ತು ಮೂರನೇ ಜನಜಾತೀಯ ಗೌರವ ದಿವಸ್ ಆಚರಣೆ ಸಂದರ್ಭದಲ್ಲಿ ಖುಂಟಿಯ ಬಿರ್ಸಾ ಮುಂಡಾ ಕಾಲೇಜು ಮೈದಾನದಲ್ಲಿ ಮೋದಿ ಅತ್ಯಂತ ಹಿಂದುಳಿದ ಆದಿವಾಸಿಗಳಿಗೆ ನ್ಯಾಯವನ್ನು ಒದಗಿಸಲು 24,000 ಕೋ.ರೂ.ಗಳ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದರು.
ಯಾತ್ರೆಯು 2,500ಕ್ಕೂ ಅಧಿಕ ಐಇಸಿ (ಮಾಹಿತಿ,ಶಿಕ್ಷಣ,ಸಂವಹನ) ವ್ಯಾನ್ಗಳೊಂದಿಗೆ 14,000ಕ್ಕೂ ಹೆಚ್ಚಿನ ಸ್ಥಳಗಳಲ್ಲಿಯ 2.5 ಲ.ಗ್ರಾಮ ಪಂಚಾಯತ್ಗಳು ಮತ್ತು 3,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಬುಡಕಟ್ಟು ಪ್ರದೇಶಗಳಿಂದ ಆರಂಭಗೊಳ್ಳುವ ಯಾತ್ರೆಯು ಎರಡು ತಿಂಗಳುಗಳ ಕಾಲ ನಡೆಯಲಿದೆ.
ಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾಲ್ಕು ಅಮೃತ ಮಂತ್ರಗಳನ್ನೂ ಪ್ರಧಾನಿ ನೀಡಿದರು.
‘ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಾವು ದೇಶವನ್ನು ಅಭಿವೃದ್ಧಿಗೊಳಿಸಬೇಕಿದ್ದರೆ ನಾವು ನಾಲ್ಕು ಅಮೃತ ಸ್ತಂಭಗಳನ್ನು ಬಲಗೊಳಿಸಬೇಕು. ದೇಶದ ಮಹಿಳೆಯರು,ರೈತರು,ಯುವಜನರು ಹಾಗೂ ನವ ಮಧ್ಯಮ ವರ್ಗ ಮತ್ತು ಬಡ ಜನರು ಈ ನಾಲ್ಕು ಸ್ತಂಭಗಳಾಗಿದ್ದಾರೆ ’ ಎಂದರು.
‘ಈ ನಾಲ್ಕು ಸ್ತಂಭಗಳನ್ನು ನಾವು ಅಭಿವೃದ್ಧಿಗೊಳಿಸಿದಷ್ಟೂ ದೇಶವು ಅಷ್ಟೇ ಅಭಿವೃದ್ಧಿಗೊಳ್ಳುತ್ತದೆ ’ ಎಂದು ಹೇಳಿದ ಮೋದಿ,ಈ ನಾಲ್ಕು ಅಮೃತ ಸ್ತಂಭಗಳನ್ನು ಅಭಿವೃದ್ಧಿಗೊಳಿಸಲು ಕಳೆದ 10 ವರ್ಷಗಳಲ್ಲಿ ಆಗಿರುವ ಕೆಲಸವು ಹಿಂದೆಂದೂ ಆಗಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಾನಂತರ ಹಲವಾರು ದಶಕಗಳ ಕಾಲ ಬುಡಕಟ್ಟು ಸಮುದಾಯವನ್ನು ಕಡೆಗಣಿಸಲಾಗಿತ್ತು, ಆದರೆ ಅಟಲ್ ಬಿಹಾರಿ ವಾಜಪೇಯಿಯವರು ಆದಿವಾಸಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸೃಷ್ಟಿಸಿದ್ದರು ಮತ್ತು ಅವರ ಸರಕಾರವು ಆದಿವಾಸಿಗಳ ಕಲ್ಯಾಣಕ್ಕಾಗಿ ಬಜೆಟ್ ಹಂಚಿಕೆಯನ್ನು ಆರು ಪಟ್ಟುಗಳವರೆಗೆ ಹೆಚ್ಚಿಸಿತ್ತು ಎಂದರು.
ಅನಿವಾರ್ಯವಾಗಿ ಕಾಡಿನಲ್ಲಿಯೇ ವಾಸವಾಗಿರುವ ಪ್ರಾಚೀನ ಬುಡಕಟ್ಟು ಜನಾಂಗಗಳು ಇನ್ನೂ ರೈಲಿನ ಶಬ್ದವನ್ನೂ ಕೇಳಿಲ್ಲ ಎಂದು ಹೇಳಿದ ಅವರು, ತನ್ನ ಸರಕಾರವು ದೇಶದ ವಿವಿಧ ಭಾಗಗಳಲ್ಲಿಯ 2,200ಕ್ಕೂ ಅಧಿಕ ಗ್ರಾಮಗಳಲ್ಲಿ ವಾಸವಾಗಿರುವ ಇಂತಹ ಸುಮಾರು 75 ಪ್ರಾಚೀನ ಬುಡಕಟ್ಟುಗಳನ್ನು ಗುರುತಿಸಿದೆ. ಅವರು ಬುಡಕಟ್ಟು ಸಮುದಾಯಗಳಲ್ಲಿಯೇ ಅತ್ಯಂತ ಹಿಂದುಳಿದವರಾಗಿದ್ದರೆ ಮತ್ತು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ ಎಂದರು.
ಬೇರೆ ಯಾವುದೇ ಸರಕಾರವು ಈ ಆದಿವಾಸಿಗಳ ಬಗ್ಗೆ ಕಾಳಜಿಯನ್ನು ತೋರಿಸಿರಲಿಲ್ಲ. ಹೀಗಾಗಿ ತನ್ನ ಸರಕಾರವು ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವರನ್ನು ತಲುಪಲಿದೆ ಎಂದು ಮೋದಿ ಹೇಳಿದರು.