ಮುಂದಿನ ಐದು ವರ್ಷಗಳ ಕಾಲ ಒಗ್ಗಟ್ಟಿನಿಂದ ದೇಶಕ್ಕಾಗಿ ಹೋರಾಡಲು ಎಲ್ಲ ಪಕ್ಷಗಳಿಗೆ ಪ್ರಧಾನಿ ಮೋದಿ ಆಗ್ರಹ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು, ಲೋಕಸಭಾ ಚುನಾವಣೆಗಳಲ್ಲಿ ತಮ್ಮ ತೀರ್ಪನ್ನು ಜನರು ನೀಡಿದ್ದಾರೆ ಮತ್ತು ಮುಂದಿನ ಐದು ವರ್ಷಗಳ ಎಲ್ಲ ರಾಜಕೀಯ ಪಕ್ಷಗಳು ದೇಶಕ್ಕಾಗಿ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.
ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಮುಂಗಡಪತ್ರವು ಮುಂದಿನ ಐದು ವರ್ಷಗಳ ಪಯಣಕ್ಕೆ ದಿಕ್ಸೂಚಿಯಾಗಲಿದೆ ಮತ್ತು 2047ರಲ್ಲಿ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಲು ಬುನಾದಿಯನ್ನು ಹಾಕಲಿದೆ ಎಂದರು.
ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ ಕೆಲವು ಪಕ್ಷಗಳ ‘ನಕಾರಾತ್ಮಕ ರಾಜಕೀಯ’ವನ್ನು ಟೀಕಿಸಿ,ಅವು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಸತ್ತಿನ ಸಮಯವನ್ನು ಬಳಸಿಕೊಂಡಿದ್ದವು ಎಂದು ಹೇಳಿದರು.
ಕಳೆದ ಅಧಿವೇಶನದಲ್ಲಿ ತನ್ನ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ದಾಳಿಯನ್ನೂ ನಡೆಸಿದ ಅವರು,ಪ್ರಜಾಪ್ರಭುತ್ವದಲ್ಲಿ ಇಂತಹ ತಂತ್ರಗಳಿಗೆ ಸ್ಥಾನವಿಲ್ಲ ಎಂದು ಹೇಳಿದರು.
ತಾನು ಜನರಿಗೆ ನೀಡಿರುವ ಭರವಸೆಗಳನ್ನು ಜಾರಿಗೊಳಿಸಲು ತನ್ನ ಸರಕಾರವು ಮುನ್ನಡೆಯುತ್ತಿದೆ ಎಂದು ಹೇಳಿದ ಮೋದಿ,‘ಈ ಬಜೆಟ್ ಅಮೃತ ಕಾಲದ ಪ್ರಮುಖ ಬಜೆಟ್ ಆಗಿದೆ. ನಾವು ಐದು ವರ್ಷಗಳ ಅವಕಾಶವನ್ನು ಹೊಂದಿದ್ದೇವೆ ಮತ್ತು ಬಜೆಟ್ ನಮ್ಮ ಪಯಣದ ಮಾರ್ಗಸೂಚಿಯಾಗಲಿದೆ ’ ಎಂದರು.
‘ನಮ್ಮ ಪ್ರಜಾಪ್ರಭುತ್ವದ ಹೆಮ್ಮೆಯ ಪಯಣದಲ್ಲಿ ಬಜೆಟ್ ಅಧಿವೇಶನವು ಒಂದು ಪ್ರಮುಖ ಘಟ್ಟವಾಗಿದೆ ’ಎಂದು ಮೋದಿ ಹೇಳಿದರು.
“ಜನರು ನಮ್ಮನ್ನು ದೇಶಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾರೆ, ಪಕ್ಷಕ್ಕಾಗಿ ಅಲ್ಲ. ಈ ಸಂಸತ್ ಯಾವುದೇ ಪಕ್ಷಕ್ಕಾಗಿ ಇಲ್ಲ, ದೇಶಕ್ಕಾಗಿ ಇದೆ. ಸಂಸತ್ತು ಸಂಸದರಿಗೆ ಸೀಮಿತವಾಗಿಲ್ಲ,ಅದು ದೇಶದ 140 ಕೋಟಿ ಜನರಿಗಾಗಿದೆ” ಎಂದು ಹೇಳಿದ ಮೋದಿ, ಎಲ್ಲ ಸಂಸದರು ಚರ್ಚೆಗಳಿಗೆ ತಮ್ಮ ಕೊಡುಗೆಗಳನ್ನು ಸಲ್ಲಿಸುತ್ತಾರೆ ಎಂದು ಆಶಯವನ್ನು ವ್ಯಕ್ತಪಡಿಸಿದರು.
ಅಭಿಪ್ರಾಯಗಳನ್ನು ವಿರೋಧಿಸುವಲ್ಲಿ ಯಾವುದೇ ತಪ್ಪು ಇಲ್ಲ,ಆದರೆ ನಕಾರಾತ್ಮಕ ಅಭಿಪ್ರಾಯಗಳು ತಪ್ಪು,ದೇಶಕ್ಕೆ ನಕಾರಾತ್ಮಕತೆಯ ಅಗತ್ಯವಿಲ್ಲ ಎಂದು ಹೇಳಿದ ಅವರು,‘ನಾವು ಅಭಿವೃದ್ಧಿ ಮತ್ತು ಪ್ರಗತಿಯ ಸಿದ್ಧಾಂತದೊಂದಿಗೆ ದೇಶವನ್ನು ಮುನ್ನಡೆಸಬೇಕಿದೆ ’ಎಂದರು.
‘ಸುಮಾರು 60 ವರ್ಷಗಳ ಬಳಿಕ ಸರಕಾರವೊಂದು ಮೂರನೇ ಸಲ ಅಧಿಕಾರಕ್ಕೆ ಮರಳಿರುವುದು ಮತ್ತು ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸುವ ಗೌರವವನ್ನು ಪಡೆದಿರುವುದು ವೈಯಕ್ತಿಕವಾಗಿ ನನಗೆ ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅತೀವ ಹೆಮ್ಮೆಯ ವಿಷಯವಾಗಿದೆ. ದೇಶವು ಇದನ್ನು ಭಾರತೀಯ ಪ್ರಜಾಪ್ರಭುತ್ವದ ವೈಭವಪೂರ್ಣ ಪಯಣದಲ್ಲಿ ಅತ್ಯಂತ ಹೆಮ್ಮೆಯ ಘಟನೆಯನ್ನಾಗಿ ನೋಡುತ್ತಿದೆ’ ಎಂದು ಅವರು ಹೇಳಿದರು.
“ಕಳೆದ ಸತತ ಮೂರು ವರ್ಷಗಳಲ್ಲಿ ಸುಮಾರು ಶೇ.8ರಷ್ಟು ಬೆಳವಣಿಗೆಯೊಂದಿಗೆ ಭಾರತವು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಎಂದು ಒತ್ತಿ ಹೇಳಿದ ಮೋದಿ, ಇಂದು ಧನಾತ್ಮಕ ದೃಷ್ಟಿಕೋನ, ಹೂಡಿಕೆ ಮತ್ತು ಕಾರ್ಯಕ್ಷಮತೆಯಿಂದಾಗಿ ಅವಕಾಶಗಳು ಉತ್ತುಂಗದಲ್ಲಿವೆ” ಎಂದು ಹೇಳಿದರು.