ಪ್ರಧಾನಿ ಮೋದಿಯಿಂದ ಇಂದು ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಸರ್ವಋತು ಪರ್ಯಾಯ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಮತ್ತು ಲಡಾಖ್ ಗೆ ಮಿಲಿಟರಿ ಪಡೆ ಕ್ಷಿಪ್ರವಾಗಿ ತೆರಳಲು ಅನುಕೂಲವಾಗುವಂತೆ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಎನಿಸಿದ ಶಿಂಕೂಲ್ ಲಾ ಸುರಂಗಕ್ಕೆ ಮೋದಿ ವರ್ಚುವಲ್ ಚಾಲನೆ ನೀಡುವರು.
ಸುಮಾರು 4.1 ಕಿಲೋಮೀಟರ್ ಉದ್ದದ ಈ ಅವಳಿ ಕೊಳವೆ ಸುರಂಗಗಳು 15,800 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದ್ದು, ಗಡಿ ರಸ್ತೆ ಸಂಸ್ಥೆ ಇದನ್ನು ನಿರ್ಮಿಸುತ್ತಿದೆ. ಶಿಂಕೂನ್ ಪಾಸ್ನಿಂದ ನಿಮ್ಮು- ಪದಮ್- ದೋರ್ಚಾ ರಸ್ತೆಯ ಮೂಲಕ ಈ ಸುರಂಗ ಸಾಗಲಿದೆ. ಸುಮಾರು 1681 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಇದಕ್ಕೆ ಅನುಮೋದನೆ ನೀಡಿತ್ತು.
ಪ್ರತಿಕೂಲ ಹಾಗೂ ಕಠಿಣ ಹವಾಮಾನದ ಪರಿಸ್ಥಿತಿ ಮತ್ತು ಕಣಿವೆ ಕಂದಕಗಳ ಹೊರತಾಗಿಯೂ ಉತ್ತರದಲ್ಲಿ ಚೀನಾ ಗಡಿಯುದ್ದಕ್ಕೂ ಸುರಂಗಗಳನ್ನು ನಿರ್ಮಾಣ ಮಾಡುವುದು ಭಾರತದ ಪ್ರಮುಖ ಆದ್ಯತೆಯಾಗಿದೆ. ಲಡಾಖ್ ನಲ್ಲಿ ಸತತ ಐದನೇ ವರ್ಷ ಕೂಡಾ ಚೀನಾ ಜತೆಗಿನ ಮಿಲಿಟರಿ ಸಂಘರ್ಷ ಮುಂದುವರಿಯುತ್ತಿರುವ ನಡುವೆಯೇ ಈ ಪ್ರಮುಖ ಮೂಲಸೌಕರ್ಯ ನಿರ್ಮಾಣವಾಗುತ್ತಿದೆ.
ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಬಲಿಪುರ-ಚರಿಂದೂರು-ತವಾಂಗ್ ರಸ್ತೆಯಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಸೆಲಾ ಸುರಂಗವನ್ನು 825 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದನ್ನು ಕಳೆದ ಮಾರ್ಚ್ ನಲ್ಲಿ ಉದ್ಘಾಟಿಸಲಾಗಿತ್ತು. ಇದನ್ನು ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಇಂಧನ ಮತ್ತು ಇತರ ಅಗತ್ಯ ಪೂರೈಕೆಗಳ ಭೂಗತ ದಾಸ್ತಾನಿಗೂ ಬಳಸಿಕೊಳ್ಳಬಹುದಾಗಿದೆ.