ಪ್ರಧಾನಿ ನರೇಂದ್ರ ಮೋದಿ ಭಾಷಣ | ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಜಾರ್ಖಂಡ್ ನಾಗರಿಕ ಸಮಾಜದ ಗುಂಪು
ನರೇಂದ್ರ ಮೋದಿ | PC : PTI
ರಾಂಚಿ : ಮುಸ್ಲಿಮರನ್ನು ಗುರಿಯಾಗಿರಿಸಿ ಪ್ರಚೋದನಾಕಾರಿ ಹೇಳಿಕೆ ನೀಡುವುದರೊಂದಿಗೆ ಜನರನ್ನು ದಾರಿ ತಪ್ಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಾರ್ಖಂಡ್ ನ ನಾಗರಿಕ ಸಮಾಜದ ಸಂಘಟನೆಗಳ ಗುಂಪು ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಸಂಪರ್ಕಿಸಿದೆ.
ಚಾಯ್ಬಾಸಾದಲ್ಲಿ ಮೇ 3ರಂದು ಹಾಗೂ ಪಾಲಮುವಿನಲ್ಲಿ ಮೇ 4ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ವಿರುದ್ಧ ‘ಲೋಕತಂತ್ರ ಬಚಾವೊ 2024’ (ಪ್ರಜಾಪ್ರಭುತ್ವ ರಕ್ಷಿಸಿ 2024) ಹೆಸರಿನ ನಾಗರಿಕ ಸಮಾಜ ಸಂಘಟನೆಗಳ ಗುಂಪು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಕೆ. ರವಿ ಕುಮಾರ್ ಅವರಿಗೆ ದೂರು ನೀಡಿದೆ.
ಜೀನ್ ಡ್ರೆಝ್, ಎಲಿನಾ ಹೊರೊ, ಸಿರಾಜ್ ದತ್ತಾ ಹಾಗೂ ಟಾಮ್ ಕಾವ್ಲಾ ಅವರನ್ನು ಒಳಗೊಂಡ ನಾಲ್ವರು ಸಾಮಾಜಿಕ ಹೋರಾಟಗಾರರ ನಿಯೋಗ ರವಿ ಕುಮಾರ್ ಅವರನ್ನು ಸೋಮವಾರ ಭೇಟಿಯಾಗಿದೆ. ಅನಂತರದ ತನ್ನ ಹೇಳಿಕೆಯಲ್ಲಿ ನಿಯೋಗ, ದೂರಿನ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ರವಿ ಕುಮಾರ್ ಅವರು ಯಾವುದೇ ಸೂಚನೆ ನೀಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಸ್ಲಿಮರಿಗೆ ಅನುಕೂಲವಾಗುವಂತೆ ಬದಲಾಯಿಸಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಹೇಳಿದ್ದರು.
ಇತ್ತೀಚಿನ ವಾರಗಳಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಅವರು ಈ ಹೇಳಿಕೆಯನ್ನು ಹಲವು ಬಾರಿ ನೀಡಿದ್ದರು.